ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ ೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನುಆಚರಿಸಲಾಯಿತು.ಜ್ಞಾನದ ಸಂಕೇತವಾಗಿರುವ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮ ಭಟ್, ಪ್ರತಿನಿತ್ಯ ಯೋಗ ಮಾಡಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯರಾದ ವಸಂತ ಭಟ್ ಮಾತನಾಡಿ ನಾವು ಪ್ರತಿನಿತ್ಯ ಯೋಗ ಮಾಡುವುದರ ಮೂಲಕ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ತನ್ಮೂಲಕ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀನಿಕೇತನ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ ಭಟ್, ಯೋಗ ಶಿಕ್ಷಕರಾದ ರಘುರಾಮ ಹೆಗಡೆ ಹಾಗೂ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಭಾಕಾರ್ಯಕ್ರಮದ ನಂತರ ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಲಾಯಿತು.ಶಾಲೆಯ ದೈಹಿಕ ಶಿಕ್ಷಕರಾದ ದಿಲೀಪ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.