ಯಲ್ಲಾಪುರ:ತಾಲೂಕಿನ ಆನಗೋಡ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸುದರ್ಶನ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ರಾತ್ರಿ ನಡೆದ ಕಾವ್ಯ-ಚಿತ್ರ-ಯಕ್ಷ-ನೃತ್ಯ ಎಂಬ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.
ಪ್ರೇಕ್ಷಕರು ನೀಡುವ ಪೌರಾಣಿಕ ಸಂದರ್ಭಗಳ ವಿವರಕ್ಕೆ ಅವಧಾನಿಗಳು ಯಕ್ಷ ಛಂದಸ್ಸಿನಲ್ಲಿ ಪದ್ಯ ರಚಿಸಿದರು. ಹಿಮ್ಮೇಳ ವೈಭವದೊಂದಿಗೆ ಆ ಸಂದರ್ಭಕ್ಕೆ ತಕ್ಕ ಚಿತ್ರವನ್ನು ಕಲಾವಿದರು ರಚಿಸಿದರು. ಕಾವ್ಯದ ಓದು ವಿವರಣೆಯ ನಂತರ ಹಿಮ್ಮೇಳದವರು ಪದ್ಯವನ್ನು ಪ್ರಸ್ತುತಪಡಿಸಿದರು. ಅದಕ್ಕೆ ಕಲಾವಿದರು ನೃತ್ಯಾಭಿನಯ ಮಾಡುವ ಮೂಲಕ ರಂಜಿಸಿದರು.
ದ್ವಾರಕೆ ನಿರ್ಮಾಣ, ಚಂದ್ರಹಾಸ ಚರಿತ್ರೆ, ಕಂಸನ ವಧೆಗೆ ಹೋಗುವ ಮುನ್ನ ಕೃಷ್ಣ-ಗೋಪಿಕೆಯರ ಸನ್ನಿವೇಶ, ಪಾರಿಜಾತ, ಭೀಷ್ಮ ವಿಜಯ ಮುಂತಾದ ಪೌರಾಣಿಕ ಸನ್ನಿವೇಶಗಳನ್ನು ಕಲಾವಿದರು ತಕ್ಷಣದಲ್ಲಿಯೇ ಕಾವ್ಯ, ಚಿತ್ರ, ಗಾನ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿದ ಈ ವಿಶಿಷ್ಟ ಪ್ರಯೋಗ ಗಮನ ಸೆಳೆಯಿತು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಅವಧಾನಿಗಳಾಗಿ ಅಷ್ಟಾವಧಾನಿ ಗಣೇಶ ಕೊಪ್ಪಲತೋಟ, ಪೃಚ್ಛಕರಾಗಿ ಡಾ.ಡಿ.ಕೆ.ಗಾಂವ್ಕರ, ಚಿತ್ರ ರಚನೆಯಲ್ಲಿ ಕಲಾವಿದ ಸತೀಶ ಯಲ್ಲಾಪುರ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಮೋದ ಹೆಗಡೆ ಕಬ್ಬಿನಗದ್ದೆ, ಮುಮ್ಮೇಳದಲ್ಲಿ ಭಾಸ್ಕರ ಗಾಂವ್ಕಾರ ಬಿದ್ರೆಮನೆ, ಸದಾಶಿವ ಭಟ್ಟ ಮಲವಳ್ಳಿ, ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ ಭಾಗವಹಿಸಿದ್ದರು. ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಸ್ವಾಗತಿಸಿದರು.
ಮನ ರಂಜಿಸಿದ ಕಾವ್ಯ-ಚಿತ್ರ-ಯಕ್ಷ-ನೃತ್ಯ ಕಾರ್ಯಕ್ರಮ
