ಶಿರಸಿ : ತಾಲೂಕಿನ ಕುಳವೆ ಗ್ರಾಮ ಪಂಚಾಯತದ ಕಲ್ಲಾಪುರ ಕೆರೆಯ ಸುತ್ತಲೂ ಗಿಡ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು.
ಕೆರೆ ಅಭಿವೃದ್ಧಿ ಸಮಿತಿ ಕಲ್ಲಾಪುರ ಹಾಗೂ ಧರ್ಮಸ್ಥಳ ಕ್ಷೇತ್ರಾಭಿವೃದ್ಧಿ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಕೆರೆ ಸುತ್ತಲೂ 100 ಗಿಡಗಳನ್ನು ನೆಡಲಾಯಿತು. ಇತ್ತೀಚಿಗಷ್ಟೇ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಸುತ್ತಲೂ ಗಿಡ ನೆಟ್ಟು ಕೆರೆಯ ಏರಿಯನ್ನು ಸಂರಕ್ಷಣೆ ಮಾಡಲಾಯಿತು.
ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗಾಗಿ ನಾವು ಈಗಿಂದಲೇ ಪರಿಸರ ಬೆಳೆಸುವ ಕಾರ್ಯ ಮಾಡಬೇಕು ಎಂದರು. ಕಲ್ಲಾಪುರ ಪುರಾತನ ವೀರಭದ್ರ ದೇವಾಲಯದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತ ಸದಸ್ಯ ಶ್ರೀನಾಥ ಶೆಟ್ಟಿ ಮಾತನಾಡಿ, ಮೊದಲಿನಿಂದಲೂ ಕೆರೆ ಅಭಿವೃದ್ಧಿ ನಮ್ಮ ಊರಿನ ಕನಸಾಗಿತ್ತು. ಧರ್ಮಸ್ಥಳ ಸಂಸ್ಥೆಯ ಸಹಕಾರದೊಂದಿಗೆ ಇದು ಸಾಕಾರವಾಗಿದೆ. ಕೆರೆ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಮಾಡಲಾಗುತ್ತಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಅಧಿಕಾರಿಗಳು, ಗ್ರಾಮಸ್ಥರು, ಸ್ತ್ರೀ ಶಕ್ತಿ ಸಂಘದವರು ಇದ್ದರು.