ಗೋಕರ್ಣ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಠ್ಯಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿವಿಧ ವಿಷಯ ಸಂಘಗಳ ರಚನೆ ಅತೀ ಅವಶ್ಯಕ ಎಂದು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್ ಗಾಂವಕರ ನುಡಿದರು.
ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ವಿವಿಧ ವಿಷಯ ಸಂಘಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಶಾಲಾ ವಿಷಯ ಸಂಘಗಳು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು ಹಿರೇಗುತ್ತಿ, ನಮ್ಮ ಶಾಲೆಯಲ್ಲಿ ಸಾಹಿತ್ಯ ಸಂಘ, ವಿಜ್ಞಾನ ಸಂಘ, ಪ್ರಕೃತಿ ಇಕೋ ಕ್ಲಬ್, ಆರೋಗ್ಯ ಕೂಟ, ಗಣಿತ ಸಂಘ, ಕಾನೂನು ಮತ್ತು ಸಾಕ್ಷರತಾ ಸಂಘ, ಕ್ರೀಡಾ ಸಂಘ, ಇತಿಹಾಸ ಸಂಘ, ಇಂಗ್ಲೀಷ್ ಸಂಘ, ಹಿಂದಿ ಮತ್ತು ಸಂಸ್ಕೃತ ವಿಷಯ ಸಂಘ, ಚಿತ್ರಕಲಾ ಸಂಘಗಳು ಉದ್ಘಾಟನೆಗೊಂಡು ಕಾರ್ಯಕ್ರಮಗಳಿಗೆ ಸಿದ್ದವಾಗಿದೆ. ವಿದ್ಯಾರ್ಥಿಗಳು ಎಲ್ಲ ಸಂಘಗಳಲ್ಲೂ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ವರಕವಿ ಬೇಂದ್ರೆ ಸಾಹಿತ್ಯ ಸಂಘದ ಕುರಿತು ವಿದ್ಯಾರ್ಥಿ ಕಾಂಚಿಕಾ ನೀಲಕಂಠ ನಾಯಕ, ದಿನಕರ ದೇಸಾಯಿ ಸಾಂಸ್ಕೃತಿಕ ಸಂಘದ ಧ್ಯೇಯೋದ್ಧೇಶಗಳ ಕುರಿತು ವಿದ್ಯಾರ್ಥಿ ಪ್ರೀತಿ ನಾಯಕ, ಕ್ರೀಡಾ ಸಂಘದ ಕುರಿತು ವಿದ್ಯಾರ್ಥಿ ನಾಗಶ್ರೀ ನಾಯಕ, ಆರೋಗ್ಯ ಕೂಟದ ಉದ್ದೇಶ ಕೈಗೊಳ್ಳುವ ಕಾರ್ಯಕ್ರಮ ಮತ್ತು ಪ್ರಕೃತಿ ಇಕೋಕ್ಲಬ್‌ನ ಕುರಿತು ವಿದ್ಯಾರ್ಥಿ ನಿರೀಕ್ಷಾ ನಾಯಕ ಗಣಿತ ಸಂಘದ ಕುರಿತು ವಿದ್ಯಾರ್ಥಿ ರೋಶಿನಿ ಎಂ ಗೌಡ ಇಂಗ್ಲೀಷ್ ಕ್ಲಬ್ ಕುರಿತು ವಿದ್ಯಾರ್ಥಿನಿ ನಾಗಶ್ರೀ ಗೌಡ, ಹಿಂದಿ ಸಂಘದ ಕುರಿತು ವಿದ್ಯಾರ್ಥಿ ವಿಜೇತ ಎಂ ಗುನಗಾ, ಸಂಸ್ಕೃತ ಸಂಘದ ಕುರಿತು ವಿದ್ಯಾರ್ಥಿ ಪ್ರತಿಮಾ ಗೌಡ, ಇತಿಹಾಸ ಸಂಘ ಮತ್ತು ಕಾನೂನು ಸಾಕ್ಷರತಾ ಸಂಘದ ಕುರಿತು ವಿದ್ಯಾರ್ಥಿ ಪ್ರತಿಮಾ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ್, ನಾಗರಾಜ ನಾಯಕ, ಬಾಲಚಂದ್ರ ಅಡಿಗೋಣ, ಮಹಾದೇವ ಗೌಡ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಕವಿತಾ ಅಂಬಿಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಾಂಚಿಕಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎನ್.ರಾಮು ಹಿರೇಗುತ್ತಿ ಸ್ವಾಗತಿಸಿ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು.