ಸಿದ್ದಾಪುರ; ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದರೆ ಓದಬೇಕು. ಓದಿನ ಮೂಲಕ ಮೂಲಕ ಸಾಧನೆ ಮಾಡಬೇಕು. ಸಾಧನೆ ಮೂಲಕ ಯಶಸ್ಸನ್ನು ಪಡೆದುಕೊಳ್ಳಬೇಕು .ಯಶಸ್ಸು ಅಹಂಕಾರಕ್ಕೆ ಕಾರಣ ಅಗಬಾರದು ಎಂದು ಬಿಇಒ ಸದಾನಂದ ಸ್ವಾಮಿ ಹೇಳಿದರು.
ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕಸಾಪ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಮೊಬೈಲ್ ಹಾಗೂ ಟಿವಿ ನೋಡುವುದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಇಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಆಗಬೇಕು. ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 96 ವಿದ್ಯಾರ್ಥಿಗಳು ನೂರು ಅಂಕ ಪಡೆದುಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕಸಾಪದ ಸಂಘ ಸಂಸ್ಥೆ ಪ್ರತಿನಿಧಿ ಡಾ.ವೆಂಕಟೇಶ ನಾಯ್ಕ ಮಾತನಾಡಿ ಮಾತೃಭಾಷೆ ಕುರಿತು ನಮಗೆ ಅಭಿಮಾನ ಹಾಗೂ ಪ್ರಭುತ್ವ ಇರಬೇಕು. ಬದುಕನ್ನು ಸಾರ್ಥಕ ಪಡಿಸಕೊಳ್ಳಲಿಕ್ಕೆ ಮಾತೃಭಾಷೆಯೇ ಮೂಲವಾಗಿದೆ. ಆದರೆ ಇಂದಿನ ತಂತ್ರಜ್ಞಾನದಿಂದಾಗಿ ನಾವು ನಮ್ಮ ತನವನ್ನು ಮರೆಯುತ್ತಿದ್ದೇವೆ. ಮುಂದಿನ ದಿನದಲ್ಲಿ ಎಲ್ಲ ರೀತಿಯ ಪೈಪೋಟಿ ಎದುರಿಸುವುದಕ್ಕೆ ವಿದ್ಯಾರ್ಥಿಗಳು ಸಿದ್ದರಿರಬೇಕು ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯಾಧ್ಯಾಪಕ ಜಿ.ಐ.ನಾಯ್ಕ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಪ್ರಧಾನ ಮಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ತಾಲೂಕು ಪ್ರೌಢಶಾಲಾ ಕನ್ನಡ ಸಂಘದ ಸಂಚಾಲಕ ಎಫ್.ಎನ್.ಹರನಗಿರಿ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಆಶಯ ನುಡಿಯನ್ನಾಡಿದರು.ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ಕೆ.ನಾಯ್ಕ ಸ್ವಾಗತಿಸಿದರು. ಚಂದ್ರಶೇಖರ ನಾಯ್ಕ ವಂದಿಸಿದರು. ಪಿ.ಬಿ.ಹೊಸೂರು, ಉಷಾ ಪಿ.ನಾಯ್ಕ, ಸುಜಾತಾ ಹೆಗಡೆ, ಅಣ್ಣಪ್ಪ ನಾಯ್ಕ ಶಿರಳಗಿ ನಿರ್ವಹಿಸಿದರು.