ಕಾರವಾರ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ನೋಂದಣಾಧಿಕಾರಿ ಪಿ.ಎಸ್.ಶ್ರೀಧರ್ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ್ ನಾಯಕ ಅವರ ಮನೆ ಹಾಗೂ ಕಚೇರಿಗಳ ಮೇಲೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳಿಗಾಗಿ ರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ್ದಾರೆ.
ಭ್ರಷ್ಟಚಾರ ಹಾಗೂ ಅಕ್ರಮ ಆಸಕ್ತಿ ಗಳಿಕೆ ಆರೋಪದ ಹಿನ್ನೆಲೆ ರಾಜ್ಯದ 21 ಅಧಿಕಾರಿಗಳ ಮೇಲೆ 80 ಕಡೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿತು. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಈ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಕಾರವಾರ ಎಸಿಬಿ ಡಿವೈಎಸ್ಪಿ ಪ್ರಕಾಶ್ ಹಾಗೂ ತುಮಕೂರು ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ನೇತೃತ್ವದಲ್ಲಿ ದಾಳಿ ನಡೆಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಅವರ ನಗರದ ಹಬ್ಬುವಾಡದಲ್ಲಿರುವ ನಿವಾಸ, ರಾಮನಗರ, ಬೆಂಗಳೂರಿನ ನಿವಾಸ ಹಾಗೂ ಎಂ.ಜಿ ರಸ್ತೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಇವರು ಮೂಲತಃ ರಾಮನಗರದವರು ಎನ್ನಲಾಗಿದ್ದು, ಪ್ರಭಾರ ಉಡುಪಿ ಜಿಲ್ಲಾ ನೋಂದಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಪಿಎಂಜಿಎಸ್‌ವೈ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ್ ನಾಯಕ್ ಅವರ ಬೃಂದಾವನ ಅಪಾರ್ಟ್ಮೆಂಟ್‌ನಲ್ಲಿರುವ ಫ್ಲ್ಯಾಟ್ ಹಾಗೂ ಹಬ್ಬುವಾಡದಲ್ಲಿರುವ ಕಚೇರಿ ಮೇಲೆ ದಾಳಿ ನಡೆದಿದ್ದು, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಪಿಎಂಜಿಎಸ್‌ವೈ ವಿಭಾಗಗಳಲ್ಲಿ ಕಳೆದ 25 ವರ್ಷಗಳಿಂದ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಭ್ರಷ್ಟಾಚಾರ ನಡಸಿ ಅಪಾರ ಪ್ರಮಾಣದ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ಇಬ್ಬರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಬೆಳಿಗ್ಗೆ 6 ಗಂಟೆಯಿAದ ಪ್ರಾರಂಭವಾದ ದಾಳಿ ರಾತ್ರಿಯಾದರು ಮುಂದುವರೆದಿದ್ದು, ಇನ್ನಷ್ಟು ದಾಖಲೆಗಳು ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜೀವ್ ನಾಯಕ: ಪತ್ತೆಯಾಗಿದ್ದೆಷ್ಟು?; ಪಿಎಂಜಿಎಸ್‌ವೈ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ್ ನಾಯಕ ಅವರ ಮನೆ ಹಾಗೂ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಗದು, 200 ಗ್ರಾಂ ಚಿನ್ನಾಭರಣ, ಎರಡು ಕಾರು, ಒಂದು ಬೈಕ್, ಬೇರೆಯವರ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಖರೀದಿ ಮಾಡಿರುವ ಸೈಟ್‌ಗಳ ದಾಖಲೆಗಳು ಪತ್ತೆಯಾಗಿದೆ. ಇದಲ್ಲದೇ ಹೊನ್ನಾವರದಲ್ಲಿ ಜಮೀನು ಖರೀದಿ ಮಾಡಿರುವ ದಾಖಲೆಗಳ ಪರಿಶೀಲನೆ ನಡೆದಿದೆ.
ಪಿ.ಎಸ್.ಶ್ರೀಧರ್: ಪತ್ತೆಯಾಗಿದ್ದೆಷ್ಟು?;ಜಿಲ್ಲಾ ನೋಂದಣಾಧಿಕಾರಿ ಪಿ.ಎಸ್.ಶ್ರೀಧರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ ಸುಮಾರು ನಾಲ್ಕು ಕೋಟಿ ಮೌಲ್ಯದ ಆಸ್ತಿ- ಪಾಸ್ತಿ ಸಿಕ್ಕಿದೆ. ರಾಮನಗರ, ಬೆಂಗಳೂರಿನಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ನೆಲಮಂಗಲ, ಕೋರಮಂಗಲದಲ್ಲಿ ಸೈಟ್ ಖರೀದಿ ಮಾಡಿರುವುದು, ಕನಕಪುರದಲ್ಲಿ ಫಾರ್ಮ್ ಹೌಸ್, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮನೆ ಹಾಗೂ ಕೋರಮಂಗಲದಲ್ಲಿ ಮತ್ತೊಂದು ಮನೆ ನಿರ್ಮಾಣ ಮಾಡುತ್ತಿರುವುದು ದಾಳಿ ವೇಳೆ ಪತ್ತೆಯಾಗಿದೆ. ಮನೆಯಲ್ಲಿ ಸುಮಾರು 700 ಗ್ರಾಂ ಬಂಗಾರ, 2 ಕೆಜಿಯಷ್ಟು ಬೆಳ್ಳಿ, ಜಮೀನು ಖರೀದಿ ಪತ್ರ ಕಾರು ಇನ್ನಿತರ ವಸ್ತುಗಳು ಪತ್ತೆಯಾಗಿದ್ದು, ಕಾರವಾರದ ಕಚೇರಿ ಹಾಗೂ ಹಬ್ಬುವಾಡದ ಮನೆಯಲ್ಲಿ ಯಾವುದೇ ಆಸ್ತಿ- ಪಾಸ್ತಿಗಳ ದಾಖಲೆ, ಹಣ ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ.