
ಯಲ್ಲಾಪುರ: ಮಳೆ ನಿಂತರೂ ಮಳೆಯಿಂದಾದ ಅವಘಡಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಕುಸಿದ ಗುಡ್ಡಗಳೆಷ್ಟೋ, ಮಣ್ಣಡಿಗಾದ ಮನೆಗಳೆಷ್ಟೋ. ಸಂಪರ್ಕವೂ ಸಾಧ್ಯವಾಗದೇ ಆತಂಕದಲ್ಲಿಯೇ ಸಹಾಯಕ್ಕಾಗಿ ಪರಿತಪಿಸುತ್ತಿರುವ ಜನರೆಷ್ಟೋ!
ಯಲ್ಲಾಪುರ ಅರಬೈಲ ಘಟ್ಟದ ತಪ್ಪಲು ಪ್ರದೇಶದ ಡಬ್ಗುಳಿ ಎಂಬ ಊರು ಗುಡ್ಡ ಕುಸಿತದಿಂದ ಸರ್ವನಾಶದ ಭೀಕರತೆಗೆ ಸಾಕ್ಷಿಯಾಗಿದೆ.
ಕಳೆದ ಮಳೆಗಾಲದಲ್ಲೇ ಡಬ್ಗುಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕ ಕುಸಿದು ಗುಡ್ಡದ ಕೆಳಗಿನ ಅಡಕೆ ತೋಟಕ್ಕೆ ಹಾನಿಯಾಗಿತ್ತು. ಈ ಬಾರಿಯ ಕುಸಿತ ಬೀಭತ್ಸವಾಗಿದ್ದು, ಅರ್ಧ ಕಿಲೋಮೀಟರ್ ಉದ್ದದಲ್ಲಿ ಎಕರೆಗಟ್ಟಲೆ ತೋಟ ನಾಶವಾಗುತ್ತಿದೆ. ಅದೇ ತೋಟದ ಸಾಲಿನ ತುದಿಯಲ್ಲಿರುವ ಡಬ್ಗುಳಿ ಊರು ಕೂಡ ಭೂಕುಸಿತದ ಭೀತಿಯಲ್ಲಿದ್ದು, ಊರಿನಿಂದ ಹೊರಬರಲು ಯಾವ ದಾರಿಯೂ ಇಲ್ಲ, ಸಹಾಯಕ್ಕಾಗಿ ಯಾಚಿಸಲು ಸಂಪರ್ಕ ಸಾಧನಗಳೂ ಇಲ್ಲವಾಗಿದೆ.
ಭಾನುವಾರ ಬೆಳಿಗ್ಗೆ ಡಬ್ಗುಳಿಯ ಇಬ್ಬರು ತರುಣರು ಆರೇಳು ಕಿಲೋಮೀಟರ್ ದೂರ, ಬೆಟ್ಟ-ಗುಡ್ಡಗಳನ್ನು ಏರಿಳಿದು ಅರಬೈಲ ಘಟ್ಟವನ್ನು ದಾಟಿ ಹೇಗೋ ಯಲ್ಲಾಪುರ ಪಟ್ಟಣವನ್ನು ಸೇರಿಕೊಂಡಿದ್ದು; ಇರುವ ಚೂರೇ ಚೂರು ಮೊಬೈಲು ಚಾರ್ಜನ್ನು ಬಳಸಿ ತಮ್ಮ ಸ್ನೇಹಿತರಿಗೆ ಡಬ್ಗುಳಿಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಒಂದೆಡೆ ಭವಿಷ್ಯವಾಗಿದ್ದ ತೋಟವನ್ನು ಕಳೆದುಕೊಂಡ ಆಘಾತ, ಮತ್ತೊಂದೆಡೆ ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸಿ ತಮ್ಮೂರವರ ಜೀವಾಘಾತವನ್ನು ತಪ್ಪಿಸುವ ಜವಾಬ್ದಾರಿ ಈ ಯುವಕರದ್ದು. ನೀರಿನ ಬೃಹತ್ ಅಗಳ ಒಡೆದು ತೋಟ ಅಡಕೆ-ತೆಂಗು ಬಾಳೆ ನಾಶವಾಗಿದೆ. ಜತೆಗೆ ಅಗಳದ ನೀರನ್ನು ಮಳೆಗಾಲ ಮುಗಿಯುವವರೆಗೂ ನಿಲ್ಲಿಸಲು ಸಾಧ್ಯವಾಗುಂತಿಲ್ಲ. ಅಗಳ ಒಡೆದು ನಾಗೇಶ್ ಭಟ್ ಮತ್ತು, ಪರಮೇಶ್ವರ್ ಭಟ್ ಅವರ ತೋಟ ನಾಶವಾಗಿದೆ.
ಎರಡು ದಿನಗಳ ಭರ್ತಿ ಮಳೆಗೆ ಗುಡ್ಡದ ಕೆಳಗಿನ ಹಳ್ಳ ತುಂಬಿ ಹರಿದಿದೆ. ಅದರ ಪ್ರಭಾವದಿಂದಲೋ; ರಸ್ತೆಗಾಗಿ ಗುಡ್ಡ ಅಗೆದಿದ್ದರ ಪರಿಣಾಮದಿಂದಲೋ ಭಾರೀ ಭೂಕುಸಿತವಾಗಿದ್ದು, ತೋಟ-ಗದ್ದೆಗಳು ನಾಪತ್ತೆಯಾಗಿವೆ. ವಾಸ್ತವ್ಯದ ಮನೆಗಳಾದರೂ ಇವೆಯಲ್ಲ ಎಂಬ ತೃಪ್ತಿ ಎಷ್ಟು ಕ್ಷಣಿಕವೆಂದರೆ; ಮತ್ತೊಂದು ಜೋರು ಮಳೆ ಬಂದರೂ ಕೂಡ ಗುಡ್ಡದಡಿ ದಶಕಗಳ ಹಿಂದೆ ಸ್ಥಾಪಿತವಾದ ಡಬ್ಗುಳಿಯೆಂಬ ಊರು ಶಾಶ್ವತ ಸಮಾಧಿಯಾಗಲಿದೆ. ಈ ಮಾಹಿತಿಯನ್ನು ತಿಳಿಸಲು ಜೋರು ಮಳೆಗಾಲ ನಿಂತ ನಂತರದ ದಿನಗಟ್ಟಲೆ ಕಾಲ ಯುವಕರು ನಡೆಯಬೇಕಾಯ್ತು! ಇಂಥ ಅವೆಷ್ಟು ಹಳ್ಳಿಗಳು ಸಂಪರ್ಕಕ್ಕಾಗಿ, ಪೇಟೆಗೆ ದಾರಿ ಹುಡುಕುವ ತಾರುಣ್ಯಕ್ಕಾಗಿ ಅರಬೈಲಿನ ಅಡಿಗೆ ಕಾಯುತ್ತಿವೆಯೋ! ಅವೆಷ್ಟು ಹಳ್ಳಿಗಳು ಸುದ್ದಿಯೇ ಗೊತ್ತಾಗದಂತೆ ಭೂಗತವಾದ ಹಳ್ಳಿಗಳಿವೆಯೋ ಗೊತ್ತಿಲ್ಲ.
ಕಳಚೆ ಗುಡ್ಡ ಕುಸಿತ ಘಟನೆ ವ್ಯಾಪಕ, ಅರ್ಹ ಪ್ರಚಾರವನ್ನು ಪಡೆದುಕೊಂಡಿದ್ದರಿಂದ ಡಬ್ಗುಳಿಯ ಭೂಕುಸಿತ ಪ್ರದೇಶಕ್ಕೆ ಇದುವರೆಗೂ ಯಾರೊಬ್ಬರೂ ಭೆಟ್ಟಿ ನೀಡಿಲ್ಲ. ಜನಪ್ರತಿನಿಧಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಥಳಕ್ಕೆ ಬರುತ್ತೇವೆ, ನಾಳೆ ಜೆಸಿಬಿ ತರಿಸುತ್ತೇವೆಂಬ ಆಶ್ವಾಸನೆ ನೀಡಿದ್ದಾರೆ.
ರಸ್ತೆ, ದೂರವಾಣಿ ಸಂಪರ್ಕ ಕಡಿತಗೊಂಡಿದ್ದರಿಂದ ಡಬ್ಗುಳಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿಯಿಲ್ಲ. ಸುರಕ್ಷಿತ ಪ್ರದೇಶಕ್ಕೆ ತೆರಳಿ, ಸಹಾಯ ಲಭ್ಯವಾಗಲು ತಡವಾಗಬಹುದು ಎಂಬ ಸಂದೇಶ ನೀಡಲೂ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಯುವಕರ ತಂಡ ಡಬ್ಗುಳಿಗೆ ಹೋಗಲು ಸಾಧ್ಯವಿಲ್ಲವಾದ್ದರಿಂದ ಸರಕಾರಿ ಸಹಾಯಕ್ಕೆ ಕಾಯುವುದೊಂದೇ ಮಾರ್ಗವಾಗಿದೆ. ಹತ್ತು ಮನೆಗಳ, ಐವತ್ತಕ್ಕೂ ಹೆಚ್ಚು ಮಂದಿ ನೆರವಿಗಾಗಿ ಕಾಯುತ್ತಿದ್ದಾರೆ.
“ನಮ್ಮೂರ ತೋಟ ನಾಶವಾಗಿದೆ. ಗುಡ್ಡ-ಬೆಟ್ಟಗಳನ್ನೇರಿ ಪಟ್ಟಣಕ್ಕೆ ಬಂದೆವು. ಸಹಾಯದ ನಿರೀಕ್ಷೆಯಲ್ಲಿ ಡಬ್ಗುಳಿ ಹಳ್ಳಿಗರಿದ್ದಾರೆ.”
-ಶ್ರೀಪಾದ ಭಟ್, ಡಬ್ಗುಳಿ ಗ್ರಾಮಸ್ಥ