ಕಾರವಾರ: ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯ ವಿರುದ್ಧ ಬದನಗೋಡ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ಶಿರಸಿ ಇನ್ಫೋದ ಅಜಯ್ ಭಟ್ ಸೇರಿದಂತೆ ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಸ್ಥೆಯ ಘನತೆ- ಗೌರವಗಳಿಗೆ ವ್ಯಾಪಕ ಧಕ್ಕೆ ಉಂಟಾಗಿದ್ದು, ಈ ಬಗ್ಗೆ ಸ್ಕೊಡ್‌ವೆಸ್ ಸಂಸ್ಥೆ ಕಾನೂನು ಹೋರಾಟ ಆರಂಭಿಸಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಹೇಳಿದ್ದಾರೆ.
ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ದಾಖಲೆಗಳನ್ನು ಫೋರ್ಜರಿ ಮಾಡಿ ತೇಜೋವಧೆಗೆ ಯತ್ನಿಸಿದ್ದು ಸ್ಕೊಡ್‌ವೆಸ್ ಸಂಸ್ಥೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ನನ್ನ ವಿರುದ್ಧ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ, ಸರ್ಕಾರಕ್ಕೆ ದೂರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಉತ್ತರಕನ್ನಡ ಹಾಗೂ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ದೂರುದಾರರು ಸಲ್ಲಿಸಿದ ದಾಖಲೆಗಳು ದುರುದ್ದೇಶದಿಂದ ಫೋರ್ಜರಿ ಮಾಡಲಾದ ದಾಖಲೆಗಳೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯ ಉತ್ತಮವಾಗಿರುವುದರಿಂದ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಸಂದರ್ಭವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ದೂರುದಾರರು ಸಂಸ್ಥೆಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಆಕ್ರಮವಾಗಿ ಬಳಸಿ ಫೋರ್ಜರಿ ಮಾಡಿ ಸಂಸ್ಥೆಯ ತೇಜೋವಧೆ ಮಾಡಿರುವುದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಿಡಿಗೇಡಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿ ಹಾಗೂ ಇಲಾಖೆಯ ಪತ್ರವನ್ನೇ ಫೋರ್ಜರಿ ಮಾಡಿ, ಸ್ಕೊಡ್‌ವೆಸ್ ಸಂಸ್ಥೆಯ ಬೆಳವಣಿಗೆಗೆ ಧಕ್ಕೆ ತರುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಸಂಸ್ಥೆಯ ದಾಖಲೆಗಳನ್ನು ಕದಿಯುವುದು, ಕದ್ದ ದಾಖಲೆಗಳನ್ನು ಫೋರ್ಜರಿ ಮಾಡಿ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಬೇನಾಮಿ ದೂರು ನೀಡುವುದು, ಸಂಸ್ಥೆಯ ಸಿಬ್ಬಂದಿ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಮಾಡುವುದು, ಸಂಸ್ಥೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು, ಸೇರಿದಂತೆ ವಿವಿಧ ರೀತಿಯ ಬ್ಲಾಕ್ ಮೇಲ್ ತಂತ್ರಗಳನ್ನು ಮಾಡುತ್ತಿರುವುದು ಈಗಾಗಲೇ ಸಂಸ್ಥೆಯ ಗಮನಕ್ಕೆ ಬಂದಿದೆ. ಅಂಥವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ. ಅಲ್ಲದೇ ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲೂ ಮೊಕದ್ದಮೆ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ವೆಂಕಟೇಶ ನಾಯ್ಕ ತಿಳಿಸಿದ್ದಾರೆ.
ಯೋಜನಾ ನಿರ್ದೇಶಕಿ ಮಾಲತಿ ಕರ್ಕಿ, ಕಾರ್ಯಕ್ರಮ ಅಧಿಕಾರಿ ರಿಯಾಜ್ ಮಾತನಾಡಿ, ಸುಖಾ ಸುಮ್ಮನೆ ಸಂಸ್ಥೆಯ ಹೆಸರು ಹಾಳು ಮಾಡಬಾರದು. 300ಕ್ಕೂ ಹೆಚ್ಚು ಜನರು ಸಂಸ್ಥೆಯಲ್ಲಿ ಉದ್ಯೋಗ ಕಂಡುಕೊಂಡಿದ್ದು, ಶ್ರಮಪಟ್ಟು ದುಡಿಯುತ್ತಿದ್ದಾರೆ. ಸಂಸ್ಥೆಯ ವಿರುದ್ಧ ಅಪಪ್ರಚಾರದಿಂದ ಮನಸ್ಸಿಗೆ ನೋವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸುಧೀರ ಶೆಟ್ಟಿ, ಪ್ರಜ್ಞಕುಮಾರ್, ಕುಮಾರ್ ಪಟಗಾರ ಇದ್ದರು.
2 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ; ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆ ವಿರುದ್ಧ ಪ್ರಚಾರ ಮಾಡಿದ್ದ ಬಸವರಾಜ ನಂದಿಕೇಶ್ವರ ಮಠ ಮತ್ತು ಅಜಯ್ ಭಟ್ ಮೇಲೆ ಶಿರಸಿಯ ಸಿವಿಲ್ ನ್ಯಾಯಾಲಯದಲ್ಲಿ 2 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಸೇರಿದಂತೆ 2 ಸಿವಿಲ್ ಹಾಗೂ 2 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಡಾ.ವೆಂಕಟೇಶ ನಾಯ್ಕ ತಿಳಿಸಿದ್ದಾರೆ.