ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವು ತಾಲೂಕಿನ ಕಡವಾಡದ ಜನತಾ ವಿದ್ಯಾಲಯದಲ್ಲಿ ಜೂ.14ರಿಂದ ಪ್ರಾರಂಭಗೊಂಡಿದೆ.
ಏಳು ದಿನಗಳ ಕಾಲ ನಡೆಸುವ ಈ ವಿಶೇಷ ಶಿಬಿರದಲ್ಲಿ ಶ್ರಮದಾನ, ಆರೋಗ್ಯ ತಪಾಸಣೆ, ಯೋಗ, ವ್ಯಾಯಮ, ಸ್ವಚ್ಛತೆಯ ಅರಿವು ಮೂಡಿಸುವುದು ಮುಂತಾದ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಉದ್ಘಾಟಿಸಿದ ಕಡವಾಡ ಜನತಾ ವಿದ್ಯಾಲಯದ ಮುಖ್ಯೋಪಾದ್ಯಾಯ ಕೆ.ಜಿ.ಹುಲಸ್ವಾರ್, ವಿದ್ಯಾರ್ಥಿಗಳು ತಾಳ್ಮೆ, ಅಚಲ ನಿರ್ಧಾರ, ನಿರ್ದಿಷ್ಠ ಗುರಿ, ಏಕಾಗ್ರತೆ ಮತ್ತು ಗರಿಷ್ಠ ಪ್ರಯತ್ನದಿಂದ ಏನನ್ನಾದರೂ ಸಾಧಿಸಬಹುದು ಎಂದರು. ದಿವೇಕರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಈ ಶಿಬಿರವನ್ನು ಹಮ್ಮಿಕೊಂಡಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿ, ತಾವು ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್‌ಫೆರ್ ಟ್ರಸ್ಟಿನ್ ಮುಖ್ಯಸ್ಥ ಎಸ್.ಪಿ.ಕಾಮತ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪ್ರವಚನಗಳೊಂದಿಗೆ ಪಠ್ಯೇತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರತಿಯೊಬ್ಬರೂ ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆಯನ್ನು ಓದಿ, ಅವರ ಸರಳ ಜೀವನ ಶೈಲಿ, ಗ್ರಾಮಗಳ ಜನರ ಮೇಲಿನ ಕಾಳಜಿ, ದೇಶದ ಸ್ವಾತಂತ್ರಕ್ಕಾಗಿ ತುಡಿತ ಮುಂತಾದುವುಗಳನ್ನು ಅರ್ಥೈಸಿಕೊಂಡಲ್ಲಿ ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬಹುದು ಎಂದರು.
ಶಿಬಿರದ ಕಾರ್ಯಕ್ರಮಾಧಿಕಾರಿ ಡಾ.ಬಿ.ಆರ್.ತೋಳೆಯವರು ಶಿಬಿರದ ಧ್ಯೇಯ, ಉದ್ದೇಶಗಳನ್ನು ವಿವರಿಸಿ, ಪ್ರತಿದಿನ ನಡೆಯುವ ವ್ಯಕ್ತಿತ್ವ ವಿಕಸನದ ಉಪನ್ಯಾಸ ಕಾರ್ಯಕ್ರಮಗಳ ಚಿತ್ರಣವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಪ್ರಾಚಾರ್ಯ ಡಾ.ಕೇಶವ ಕೆ.ಜಿ. ಎಲ್ಲರನ್ನು ಸ್ವಾಗತಿಸಿ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿಬಿರಾಧಿಕಾರಿ ಡಾ.ಹರೀಶ ಕಾಮತ ನಿರೂಪಿಸಿದರು. ಕೊನೆಯಲ್ಲಿ ಉಪನ್ಯಾಸಕಿ ಅನಿತಾ ತಿಳ್ವೆ ವಂದಿಸಿದರು. ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.