ಸಿದ್ದಾಪುರ: ಬಿಜೆಪಿಯಲ್ಲಿ ವ್ಯಕ್ತಿಗಿಂತ ಸೈದ್ಧಾಂತಿಕ ಚಿಂತನೆಗೆ ಮಹತ್ವ ನೀಡುತ್ತದೆ. ದೇಶ ಮೊದಲು ಎನ್ನುವದು ನಮ್ಮ ಪಕ್ಷದ ನಂಬಿಕೆ. ಬಿಜೆಪಿ ಆರಂಭದಿಂದ ಇಲ್ಲಿಯವರೆಗೂ ಹಲವು ಮಜಲುಗಳನ್ನು ಕಂಡಿದ್ದು, ನಂಬಿದ ಸಿದ್ಧಾಂತ ಬಿಟ್ಟು ಈವರೆಗೆ ಕಾರ್ಯನಿರ್ವಹಿಸಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಪಟ್ಟಣದ ಶಂಕರಮಠದಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಪ್ರಮುಖರನ್ನು, ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು.
ನಮ್ಮ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ. ನಾವು ಪಕ್ಷದ ಕಾರ್ಯಕ್ರಮ ಮಾಡಿದರೆ ಭಾರತಾಂಬೆಗೆ ಜಯವಾಗಲಿ ಎನ್ನುತ್ತೇವೆ. ಉಳಿದ ಪಕ್ಷದವರು ನಮ್ಮ ನೇತಾರರಿಗೆ ಜಯಘೋಷ ಹಾಕುತ್ತಾರೆ. ಬಿಜೆಪಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಒಂದು ಎನ್ನುವ ಮೂಲಕ ಅಧಿಕಾರ ಮಾಡುತ್ತಿದೆ. ಸಮೃದ್ಧ, ಸ್ವಾಭಿಮಾನ, ಶಕ್ತಿಶಾಲಿ ಭಾರತ ಬಿಜೆಪಿಯ ಗುರಿಯಾಗಿದ್ದು ಆ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಉಗ್ರನಿಗ್ರಹ, ರಾಮಜನ್ಮ ಭೂಮಿ ಮುಂತಾದವುಗಳ ಅನುಷ್ಠಾನದ ಮೂಲಕ ಹಲವು ಸಾಧನೆ ಮಾಡಿದೆ. ಬಿಜೆಪಿ, ಮೋದಿ ಇರುವವರೆಗೆ ದೇಶಕ್ಕೆ ಅಪಾಯವಿಲ್ಲ ಎನ್ನುವ ವಿಶ್ವಾಸ ಜನತೆಯಲ್ಲಿದೆ. ಈ ಪಕ್ಷ ಹಲವರ ತ್ಯಾಗ, ಶ್ರಮದಿಂದ ಬೆಳೆದುಬಂದಿದೆ. ಸೈದ್ಧಾಂತಿಕ ವಿಚಾರ ಒಪ್ಪಿ ಬಂದವರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮಂಡಲ ಅಧ್ಯಕ್ಷ ನಾಗರಾಜ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಮಡಿವಾಳ ನಿರೂಪಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ವಂದಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿದರು. ಬಿಜೆಪಿ ಪದಾಧಿಕಾರಿಗಳಾದ ಉಷಾ ಹೆಗಡೆ, ಕುಮಾರ ಮಾರ್ಕಾಂಡೆ, ಎನ್.ಎಸ್.ಹೆಗಡೆ, ಚಂದ್ರು ಎಸಳೆ, ಗೋವಿಂದ ನಾಯ್ಕ, ಗುರುರಾಜ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.