
ಅಂಕೋಲಾ: ತಾಲೂಕಿನ ಪ್ರವಾಹ ಪೀಡಿತರಿಗಾಗಿ ತೆರೆದಿರುವ ವಿವಿಧ ಕಾಳಜಿ ಕೇಂದ್ರಗಳಿಗೆ ಶಾಸಕಿ ರೂಪಾಲಿ ನಾಯ್ಕ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಬೆಳಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರೂರಹಾಗೂ ವಾಸರಕುದ್ರಗಿ ಪಂಚಾಯ್ತಿಯ ಕೊಡ್ಸಣಿ, ಶಿರಗುಂಜಿ ಗ್ರಾಮಗಳ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಪ್ರವಾಹ ಪೀಡಿತರಿಗೆ ಧೈರ್ಯ ಹೇಳಿದರು.
ಹಾಗೂ ಪ್ರವಾಹ ಸಂದರ್ಭದಲ್ಲಿ ದೋಣಿ ಮುಗುಚಿ ಮೃತಪಟ್ಟ ಶಿರೂರು ಗ್ರಾಮದ ಬೀರೂ ಮೋರು ಗೌಡ ಹಾಗೂ ಗಂಗಾಧರ ದೇವು ಗೌಡ ಅವರ ಕುಟುಂಬಕ್ಕೆ ತಲಾ ಐದು ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.ಸರ್ಕಾರದ ಮಾರ್ಗಸೂಚಿಯಂತೆ ಮನೆ ಕಳೆದುಕೊಂಡವರಿಗೆ ಹಾಗೂ ಮನೆಗೆ ನೀರು ನುಗ್ಗಿದವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಕೋಲಾ ಮಂಡಲ ಅಧ್ಯಕ್ಷರು, ತಹಶೀಲ್ದಾರ ತಾಲ್ಲೂಕು ಪಂಚಾಯತ ಇಒ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸ್ಥಳೀಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.