ಹೊನ್ನಾವರ: ತಾಲೂಕಿಗೆ ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಲು ಹಾಗೂ ವಿವಿಧ ಬೇಡಿಕೆಯನ್ನು ಮನಗಂಡು ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಿತು.
ತಾಲೂಕಿನ ಪ್ರಮುಖ 31 ಬೇಡಿಕೆಯನ್ನು ಮುಂದಿಟ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಾಲೂಕಿನ ಅಭಿವೃದ್ದಿ ವಿಷಯದಲ್ಲಿ ಇದುವರೆಗೂ ಸಮರ್ಪಕವಾಗಿ ಸ್ಪಂದಿಸಿಲ್ಲ. ಮುಂದಿನ ದಿನದಲ್ಲಿ ತಾಲೂಕಿನ ಹಲವು ಬೇಡಿಕೆಯನ್ನು ಈಡೇರಿಸಬೇಕು. ಆ ಮೂಲಕ ದಶಕಗಳಿಗೆ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು. ತಾಲೂಕಿಗೆ ಪ್ರತೈಕ ವಿದಾನಸಭಾ ಕ್ಷೇತ್ರ, ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಗೆ ಫ್ಲೈ ಓವರ್, ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರ, ಬಸ್ ಡಿಪೋ, ಬ್ಲಡ್ ಬ್ಯಾಂಕ್ ನಿರ್ಮಾಣ ಸೇರಿದಂತೆ ತಾಲೂಕಿಮ ಅತಿ ಅಗತ್ಯದ ಸಮಸ್ಯೆ ಮುಂದಿಟ್ಟು ಹೋರಾಟದ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘಟನೆಯ ಪ್ರಮುಖರಾದ ಜಿ.ಎನ್.ಗೌಡ, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ತಾಲೂಕಿನಲ್ಲಿ ಹಿಂದಿಗೂ ಹಲವು ಮೂಲಭೂತ ಸಮಸ್ಯೆ ಕಾಡುತ್ತಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ತಾಲೂಕಿನ ಸಮಸ್ಯೆ ಬಗೆಹರಿಸುವ ಆಸಕ್ತಿ ತೋರಿಸುತ್ತಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣದಂತೆ ತಾಲೂಕಿಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಬಗೆಹರಿಯಲು ತಾಲೂಕಿನ ಪ್ರತೈಕ ವಿಧಾನಸಭಾ ಕ್ಷೇತ್ರದ ಅಗತ್ಯವಿದ್ದು, ಇದು ಪ್ರಮುಖ ಬೇಡಿಕೆಯಾಗಿದೆ. ತಾಲೂಕಿನಲ್ಲಿ ರೈಲ್ವೆ ಮಾರ್ಗ ಹಾದು ಹೋದರು, ರಾಜಧಾನಿಗೆ ಸಂಪರ್ಕಿಸುವ ತಾಳಗುಪ್ಪಾ ರೈಲು ಕನಸಾಗಿಯೇ ಉಳಿದಿದೆ. ಸಬ್ ರಿಜಿಸ್ಟರ್ ಕಛೇರಿ ಖಾಸಗಿ ಕಟ್ಟಡದಲ್ಲಿದೆ. ಮಿನಿವಿಧಾನಸೌದದಲ್ಲಿ ಎಲ್ಲಾ ಕಛೇರಿಗಳು ಬರಲು ಇನ್ನು ಕಟ್ಟಡ ನಿರ್ಮಾಣ ಆಗಬೇಕಿದ್ದು, ಇದರಿಂದಲೂ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ ರಸ್ತೆ ಅಪಘಾತದಲ್ಲಿ ತುರ್ತಾಗಿ ರಕ್ತದ ಸಮಸ್ಯೆ ಉಂಟಾದರೆ ಕುಮಟಾಗೆ ಹೋಗಬೇಕು. ತಾಲೂಕಿನ ಅಗತ್ಯವಿರುವ ಬ್ಲಡ್ ಬ್ಯಾಂಕ್ ನಿರ್ಮಾಣವಾಗಬೇಕು. ತಾಲೂಕಿನ ತೋಟಗಾರಿಕಾ ಬೆಲೆಗೆ ಉತ್ತೇಜನ ನೀಡಿ ಲಾಭದಾಯಕ ಉದ್ಯಮವನ್ನಾಗಿಸಿ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಪ್ರಮುಖ ಬೇಡಿಕೆಯನ್ನು ಮುಂದಿಟ್ಟು ಇಂದು ಸಭೇ ನಡೆಸಿದ್ದು, ಅನುಷ್ಠಾನಗೊಳಿಸಲು ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಒತ್ತಾಯಿಸಲು ತಿರ್ಮಾನಿಸಿದ್ದೆವೆ ಎಂದರು.
ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, ಪಟ್ಟಣದ ರಸ್ತೆಗಳು ಹೊಂಡಮಯವಾಗಿದೆ. ತಾಲೂಕಿನಲ್ಲಿ ಇರ್ವರು ಶಾಸಕರುಗಳ ವ್ಯಾಪ್ತಿಗೆ ಬಂದರೂ ನಿರೀಕ್ಷೀತ ಪ್ರಮಾಣದಲ್ಲಿ ಅಭಿವೃದ್ದಿ ಕಂಡಿಲ್ಲ. ಉಳುವವನೆ ಭೂಮಿ ಒಡೆಯ ಕಾನೂನಿನಡಿ ಜಮೀನು ಪಡೆದರೂ ಕರ್ನಾಟಕ ಸರ್ಕಾರ ಎಂದು ಪಹಣೆಯಲ್ಲಿ ಬರುತ್ತಿದೆ. ಇದರಿಂದ ಮನೆ ನಿರ್ಮಾಣ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗೆ ಸೌಲಭ್ಯ ಪಡೆಯಲು ಸಾದ್ಯವಾಗುತ್ತಿಲ್ಲ. ಹಲವು ಬೇಡಿಕೆಯ ಬಗ್ಗೆ ಚರ್ಚೆ ನಡೆದಿದ್ದು, ತಾಲೂಕಿನವರು ಒಗ್ಗಟ್ಟಾಗಿ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ವಕೀಲರಾದ ಸಂಜೀವ ಕಾಮತ್ ಮಾತನಾಡಿ ಇಸ್ವತ್ತು ಸಮಸ್ಯೆಯಿಂದ ಮನೆ ಹಾಗೂ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಸರ್ಕಾರದ ಮಟ್ಟದಿಂದ ಈ ಸಮಸ್ಯೆ ಬಗೆಹರಿಯಬೇಕಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ ಅರಿತು ನಡೆಯಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿ ಶೆಟ್ಟಿ ಕವಲಕ್ಕಿ, ಎಚ್.ಆರ್.ಗಣೇಶ, ಶ್ರೀಕಾಂತ ನಾಯ್ಕ, ಎಸ್.ಎನ್.ನಾಯ್ಕ, ಮಂಜುನಾಥ ಗೌಡ ನಾಜಗಾರ, ಜಿ.ಎಚ್.ನಾಯ್ಕ, ಶಂಕರ ಗೌಡ ಗುಣವಂತೆ, ಸಚಿನ್ ನಾಯ್ಕ, ಬಾಬು ನಾಯ್ಕ ಬಳ್ಕೂರ, ದಿನೇಶ ಕಾಮತ್, ಜಗದೀಶ ನಾಯ್ಕ, ಮಾರುತಿ ಗೌಡ ಮತ್ತಿತರರು ಹಾಜರಿದ್ದರು.