ಶಿರಸಿ:ಧಾರವಾಡ ಸಹಕಾರ ಹಾಲು ಒಕ್ಕೂಟದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ಸಮಾಲೋಚನ ಸಭೆಯು ಟಿ.ಎಂ.ಎಸ್. ಸಭಾಭವನದಲ್ಲಿ ಜೂ.16 ಗುರುವಾರದಂದು ಧಾರವಾಡ ಸಹಕಾರಿ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ 3 ವರ್ಷಗಳಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಹಾಗೂ ಶಿರಸಿ ತಾಲೂಕಿನಾದ್ಯಂತ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ನಂದಿನಿ ಗೋಲ್ಡ್ ಹಾಗೂ ನಂದಿನಿ ಬೈಪಾಸ ಪಶು ಆಹಾರಗಳ ಬೆಲೆಯನ್ನು ಹಾಲು ಉತ್ಪಾದಕರ ರೈತರಿಗೆ ಹೊರೆಯಾಗದಂತೆ ದರ ನಿಗದಿಪಡಿಸಲಾಗಿದೆ.ಬಹು ವರ್ಷಗಳ ಬೇಡಿಕೆಯಾಗಿದ್ದ ಜಿಲ್ಲೆಯ ಹಾಲು ಇಲ್ಲಿಯೇ ಪ್ಯಾಕ್ ಮಾಡಿ ಮಾರಾಟ ಮಾಡುವ ಹಾಲು ಪ್ಯಾಕಿಂಗ್ ಘಟಕದ ಸ್ಥಾಪನೆಯನ್ನುಇದೇ ವರ್ಷ ಮೇ ಮಾಹೆಯಲ್ಲಿ ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿ ರೈತರಿಗೆ ಪ್ರತೀ ಲೀಟರ್ ಹಾಲಿಗೆ ನೀಡಲಾಗುವ ರೂ. 1 ಅಥವಾ ರೂ. 2 ಹೆಚ್ಚಿಸುವ ಸಾಧ್ಯತೆ ಇದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ ಒಟ್ಟೂ 68 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಜಿಲ್ಲೆಯಾದ್ಯಂತ ಉಳಿದ ಎಲ್ಲಾ ಹಾಲು ಸಂಘಗಳಿಗೆ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಸ್ವಂತ ಕಟ್ಟಡ ಹೊಂದುವಂತೆ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಗೌರವ ಧನ ನಿಗದಿ ಪಡಿಸುವ ಕುರಿತು ಕರ್ನಾಟಕ ಹಾಲು ಮಹಾಮಂಡಳದೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯಾದ್ಯಂತ ನೂತನವಾಗಿ ಪ್ರಾರಂಭವಾಗುವ ಹಾಲು ಉತ್ಪಾದಕರ ಸಂಘಗಳಿಗೆ ಆರಂಭಿಕ ಉಪಕರಣ ಖರೀದಿಸಲು ತಲಾ ರೂ. 25,000/-ಗಳನ್ನು ಒಕ್ಕೂಟದಿಂದ ನೀಡಲಾಗುತ್ತಿದೆ ಎಂದರು.
ಶಿರಸಿ ತಾಲೂಕಿನಲ್ಲಿ ಸಪ್ಟೆಂಬರ್ 2019ರಿಂದ ಇಲ್ಲಿಯ ತನಕ ದುರದೃಷ್ಟವಶಾತ್ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 20 ಸದಸ್ಯರು ಸ್ವಾಭಾವಿಕ ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 10,000/-ರಂತೆ ರೂ. 2,00,000/-ಗಳಷ್ಟು ಮೊತ್ತದ ಚೆಕ್ ಗಳನ್ನು ವಿತರಿಸಲಾಗಿದೆ. ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 2 ಸದಸ್ಯರು ಅಪಘಾತದಿಂದ ಮರಣ ಹೊಂದಿದ್ದು, ಅವರ ವಾರಸುದಾರರಿಗೆ ತಲಾ ರೂ. 25,000/-ರಂತೆ ರೂ. 50,000/- ಗಳಷ್ಟು ಮೊತ್ತದ ಚೆಕ್ ಗಳನ್ನು ವಿತರಿಸಲಾಗಿದ್ದು, ಶಿರಸಿ ತಾಲೂಕಿನಲ್ಲಿ ಸಪ್ಟೆಂಬರ್ 2019ರಿಂದ ಇಲ್ಲಿಯ ತನಕ ಹಾಲು ಪೂರೈಸುವ ಕಲ್ಯಾಣ ಸಂಘದ ಒಟ್ಟೂ 21 ಸದಸ್ಯರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಅಂತವರಿಗೆ ತಲಾ ರೂ. 5,000/-ರಂತೆ ರೂ. 1,05,000/-ಮೊತ್ತದ ಚೆಕ್ ಗಳನ್ನು ವಿತರಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಅನುದಾನದ ಅಡಿಯಲ್ಲಿ ವಿತರಿಸಲು ರಬ್ಬರ್ ಮ್ಯಾಟ್ ಗಳನ್ನು ತರಸಿಲಾಗಿದ್ದು, ಅದನ್ನು ಸಂಘಕ್ಕೆ ನೇರವಾಗಿ ವಿತರಿಸಲಾಗುವುದು.ಹಾಗೂ ಮುಂದಿನ ತಿಂಗಳಿನಲ್ಲಿ ಅರ್ಹ ಫಲಾನುಭವಿಗಳಿಗೆ ಹುಲ್ಲು ಕತ್ತರಿಸುವ ಯಂತ್ರವನ್ನೂ ಸಹ ಅನುದಾನದ ಅಡಿಯಲ್ಲಿ ನೀಡುವಂತಹ ಯೋಜನೆ ಹಾಕಿಕೊಳ್ಳಲಾಗಿದೆ.ಈಗಿನ ದಿನಗಳಲ್ಲಿ ಅತೀ ಹೆಚ್ಚು ರಾಸುಗಳು ಅದರಲ್ಲೂ ಆರೋಗ್ಯವಂತ ರಾಸುಗಳುಅಕಾಲಿಕ ಮರಣವನ್ನುಹೊಂದುತ್ತಿದ್ದು, ಅದಕ್ಕಾಗಿ ಹಾಲು ಉತ್ಪಾದಕರ ರೈತರು ಪ್ರತೀ ವರ್ಷ ರಾಸು ವಿಮೆಯನ್ನು ನವೀಕರಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಹಾಲು ಸಂಘಗಳಲ್ಲಿ ವಿದ್ಯುತ್ ಸಮಸ್ಯೆ ಇರುವ ಕಾರಣ ಸೌರಚಾಲಿತ ಹಾಲು ಕರೆಯುವ ಯಂತ್ರ ನೀಡುವ ಕುರಿತು ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗಿದೆ. ಹಾಲು ಸಂಘಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ತಪ್ಪದೇ ಪ್ರತೀ ತಿಂಗಳು ಸಭೆ ಸೇರಿ ಸಂಘದ ಲೆಕ್ಕಪತ್ರ, ವ್ಯವಹಾರಗಳ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲು ಕರೆ ನೀಡಿದರು. ಸಮಯಕ್ಕೆ ಸರಿಯಾಗಿ ಲೆಕ್ಕ ಪರಿಶೋಧನೆ ಮಾಡಿಸಿ ವಾರ್ಷಿಕ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ತಿಳಿಸಿದರು.ಪ್ರತೀ ಸಂಘಕ್ಕೂ ನನಗೆ ವೈಯಕ್ತಿಕವಾಗಿ ಖುದ್ದು ಭೇಟಿ ನೀಡಲಾಗದ ಕಾರಣ ಯಾವುದೇ ಸಮಯದಲ್ಲಾದರೂ ಕೂಡ ತಾವುಗಳು ದೂರವಾಣಿ ಮುಖಾಂತರ ಸಂಪರ್ಕಿಸಬಹುದಾಗಿದ್ದು,ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು.ಉತ್ತರಕನ್ನಡ ಜಿಲ್ಲೆಯ ಹೈನೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಕ್ಕೂಟದ ಮಾನ್ಯ ಅಧ್ಯಕ್ಷರಾದ ಶಂಕರ ವಿ ಮುಗದರವರು ಅತೀವ ಕಾಳಜಿ ಹೊಂದಿದ್ದು, ಅವರ ಜೊತೆ ಮೂರೂ ನಿರ್ದೇಶಕರು ಕೈಜೋಡಿಸಿ ಸಂಘಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಹಾಲು ಉತ್ಪಾದನೆಯನ್ನು ಹಾಗೂ ಹಾಲಿನಮಾರಾಟವನ್ನು ಹೆಚ್ಚಿಸುವತ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಪ್ರತಿನಿಧಿಗಳ ಸಹಾಯದಿಂದ ಉತ್ತರಕನ್ನಡ ಜಿಲ್ಲೆಯನ್ನು ಒಂದು ಒಕ್ಕೂಟ ಮಾಡುವಂತೆ ಮುಂದಿನ ದಿನಗಳಲ್ಲಿ ಕಾರ‍್ಯ ಯೋಜನೆ ರೂಪಿಸಲಾಗುವುದು ಎಂದರು.
2021-2022 ನೇಸಾಲಿನಲ್ಲಿಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಮ್ಮ ಬಡತನದ ಮಧ್ಯೆಯೂ ಅತೀ ಹೆಚ್ಚು ಅಂಕಗಳನ್ನು ಪಡೆದ ಹುಣಸೇಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಉತ್ಪಾದಕ ರೈತರಾದ ರಾಜು ನಾಯ್ಕರ ಮಗಳಾದ ದೀಕ್ಷಾ ರಾಜು ನಾಯ್ಕ ಹಾಗೂ ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಗೋಪಾಲ ಮಡಿವಾಳ ಅವರ ಮಗಳಾದ ಶ್ರೇಯಾ ಗೋಪಾಲ ಮಡಿವಾಳ ವರಿಗೆ ಕೆ.ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ಸಹಾಯ ಧನದ ಚೆಕ್ ನ್ನು ವಿತರಿಸಿ ಸನ್ಮಾನಿಸಿದರು.
ಸಹಕಾರ ಸಂಘಗಳ ಮಾರಾಟಾಧಿಕಾರಿಗಳಾದ ಡಿಸೋಜಾ ಅವರು ಉಪಸ್ಥಿತರಿದ್ದುಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕೂಡಲೇ ತಮ್ಮ ಲೆಕ್ಕಪರಿಶೋಧನೆಯನ್ನು ಮಾಡಿಸಿ ಶೀಘ್ರದಲ್ಲಿಯೇ ವರದಿಯನ್ನುಸಹಾಯಕ ನಿಬಂಧಕರ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದರು. ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್ ಅವರು ಕಾರ‍್ಯಕ್ರಮದ ನಿರೂಪಣೆ ಮಾಡಿದರು.ಸಹಾಯಕ ವ್ಯವಸ್ಥಾಪಕರಾದ ಡಾ.ವಿವೇಕ್ ಎಸ್ ಆರ್, ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ,ದಯಾನಂದ ಎ ಎನ್, ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ್ ಭಟ್ , ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಚಂದನ ನಾಯ್ಕ,ಜಯಂತ ಪಟಗಾರ, ಪ್ರವೀಣ ಬಳ್ಳಾರಿ,ನಿಖಿಲ್ ನಾಯ್ಕ ಹಾಗೂ ಶಿರಸಿ ತಾಲೂಕಿನ ಹಾಲು ಸಂಘಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಹಾಲು ಉತ್ಪಾದಕರ ರೈತರು ಉಪಸ್ಥಿತರಿದ್ದರು.