ಅಂಕೋಲಾ: ಕನ್ನಡ ನಾಡು- ನುಡಿಯ ರಕ್ಷಣೆ, ಯುವ ಜನತೆಯಲ್ಲಿ ಕನ್ನಡ ಪ್ರೀತಿ ಬೆಳೆಸುವ, ಕನ್ನಡ ಶಾಲೆ ಉಳಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಹಿರಿಯ ಸಾಹಿತಿಗಳ ಸಂಗಮವಾದ ಅಂಕೋಲೆಯ ಮಿತ್ರ ಸಂಗಮ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ‘ಕನ್ನಡ ಕನ್ನಡ ಸವಿಗನ್ನಡ’ ಕಾರ್ಯಕ್ರಮ ಸರಣಿಯನ್ನು ಹಮ್ಮಿಕೊಂಡಿದೆ. ಈ ಸರಣಿಯ ಮೊದಲ ಕಾರ್ಯಕ್ರಮ ಅಂಕೋಲೆಯ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಜೂ.18ರಂದು ಮುಂಜಾನೆ 10.30ಕ್ಕೆ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ರಾಮಕೃಷ್ಣ ಗುಂದಿ ‘ಕನ್ನಡ ಸಾಹಿತ್ಯ ಸಾಗಿಬಂದ ಹಾದಿ’ ಕುರಿತು ಮಾತನಾಡಲಿದ್ದಾರೆ. ಇನ್ನೋರ್ವ ಸಾಹಿತಿ, ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು ‘ಕನ್ನಡ ಭಾವಗೀತೆಗಳ ಸಂಭ್ರಮ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಲೇಖಕ ಮಹಾಂತೇಶ ರೇವಡಿ ‘ಮಿತ್ರ ಸಂಗಮ ಹಾಗೂ ಕಾರ್ಯಕ್ರಮದ’ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ, ಹಿರಿಯ ಸಾಹಿತಿ, ಶಾಂತಾರಾಮ ನಾಯಕ ಹಿಚಕಡ ವಹಿಸಲಿದ್ದಾರೆ. ವಿಶ್ರಾಂತ ಪ್ರಾಚಾರ್ಯ ವಿ.ಆರ್.ವೇರ್ಣೆಕರ್, ಸಾಹಿತಿ ಜೆ.ಪ್ರೇಮಾನಂದ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸಕ್ತರು ಪಾಲ್ಗೊಳ್ಳಬಹುದೆಂದು ಸಂಘಟನೆಯ ಪರವಾಗಿ ಮಹಾಂತೇಶ ರೇವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.