ಕಾರವಾರ: ವಿಶೇಷ ಅಭಿಯಾನದ ಮೂಲಕ ವಾಹನಗಳ ದಾಖಲಾತಿ ಸರಿಪಡಿಸಿಕೊಳ್ಳಲು 15 ದಿನದ ಕಾಲಾವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿಯೂ ಸರಿಪಡಿಸಿಕೊಳ್ಳದೆ ಇದ್ದಲ್ಲಿ ಜಿಲ್ಲೆಯಾದ್ಯಂತ ಸಾರಿಗೆ ಮತ್ತು ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಾಚರಣೆ ಹಮ್ಮಿಕೊಂಡು ಅನಧಿಕೃತ ವಾಹನಗಳನ್ನು ಜಪ್ತಿಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಪೆನ್ನೇಕರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸವಾರರು ಸರಿಯಾದ ದಾಖಲೆ ಹೊಂದಿರದ ಕಾರಣ ಗುರುತುಪತ್ತೆ ಕೂಡ ಕಷ್ಟಸಾಧ್ಯವಾಗಿದೆ. ಇದೇ ಕಾರಣಕ್ಕೆ ವಾಹನಗಳ ಮಾಲಿಕತ್ವ, ವಿಳಾಸ ಬದಲಾವಣೆ ಹಾಗೂ ಮರು ವಾಹನ ನೊಂದಣಿ ಸಮಸ್ಯೆಗಳನ್ನು ಸರಿಪಡಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ವಾಹನ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನದಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಇದರಿಂದಾಗಿ ಕೆಲವರು ಗಾಯಗೊಂಡರೆ ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೆಲ ಅಪಘಾತ ಪ್ರಕರಣಗಳಲ್ಲಿ ಪೊಲೀಸರಿಗೆ ಅಪಘಾತಗೊಂಡವರ ಗುರುತು ಪತ್ತೆ ಕಷ್ಟವಾಗುತ್ತಿದೆ. ವಾಹನವನ್ನು ಬೇರೆಯವರಿಂದ ಖರೀದಿ ಮಾಡಿದವರು ಮಾಲಿಕತ್ವ ಬದಲಾವಣೆ ಮಾಡದೇ ಚಾಲನೆ ಮಾಡುತ್ತಿದ್ದಾರೆ. ವಾಹನ ಮಾಲಿಕರು ವಾಸಿಸುವ ವಿಳಾಸ ಸಂಪೂರ್ಣ ಬದಲಾವಣೆಯಾಗಿರುತ್ತದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ತಾತ್ಕಾಲಿಕ ಸ್ಥಳಿಯ ವಿಳಾಸ ನೀಡಿ ವಾಹನಗಳ ನೊಂದಣಿ ಮಾಡಿಸಿಕೊಂಡು ಪ್ರಸ್ತುತ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಲ್ಲಿ ವಾಸಿಸುತ್ತಿರುವ ವಾಹನಗಳ ಮಾಲಿಕರು ಸಹ ತಮ್ಮ ವಿಳಾಸ ಬದಲಾವಣೆ ಮಾಡಿಕೊಳ್ಳದೆ ಇರುವುದರಿಂದ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮತ್ತು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳಲ್ಲಿ ವಾಹನಗಳ ಪತ್ತೆ ಕಷ್ಟವಾಗುತ್ತಿದೆ. ಆದರೆ ಇದೇ ಕಾರಣಕ್ಕೆ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಿ ವಾಹನಗಳ ಮಾಲಿಕತ್ವ ಬದಲಾವಣೆ, ವಿಳಾಸ ಬದಲಾವಣೆ, ಮರು ವಾಹನ ನೊಂದಣಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆರ್ಟಿಓ ರಾಮಕೃಷ್ಣ ಮಾತನಾಡಿ, ಕಡ್ಡಾಯವಾಗಿ ಎಲ್ಲರೂ ವಾಹನಗಳಿಗೆ ಸೂಕ್ತ ದಾಖಲಾತಿ ಹೊಂದಿರಬೇಕು. ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಮಾಲಿಕರು ಆನ್ ಲೈನ್ ಇಲ್ಲವೇ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಾಹನಗಳ ಮಾಲಿಕರು ವಾಸಿಸುವ ಮನೆ, ಕಛೇರಿ ಸೇರಿದಂತೆ ವಿಳಾಸ ಬದಲಾವಣೆಯಾಗಿದ್ದರೆ ಭಾರತೀಯ ಮೋಟಾರು ವಾಹನ ಕಾಯಿದೆ -1988 ಕಲಂ 49 ರನ್ವಯ ಕೂಡಲೇ ತಮ್ಮ ವಿಳಾಸ ಬದಲಾವಣೆ ಮಾಡಿಕೊಳ್ಳಬೇಕು. ಇದಕ್ಕೆ ಮುಖ್ಯವಾಗಿ ಫಾರ್ಮ ನಂ 33, ವಾಹನ ನೊಂದಣಿ, ವಿಮೆ, ಹೊಗೆ ತಪಾಸಣಾ ಪ್ರಮಾಣಪತ್ರ, ಆಧಾರ ಕಾರ್ಡ್, ಪ್ರಸ್ತುತ ವಿಳಾಸ ದೃಢಿಕರಣ ಪತ್ರ ಹಾಗೂ ವಾಸಸ್ಥಳ ಪ್ರಮಾಣಪತ್ರ ನೀಡಬೇಕು. ವಾಹನಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಲ್ಲಿ ಇಲ್ಲವೇ ಖರೀದಿಸಿದ್ದಲ್ಲಿಯೂ ಈ ಮೇಲಿನ ದಾಖಲಾತಿಗಳ ಜೊತೆಗೆ ಫಾರ್ಮ ನಂ 29 ಮತ್ತು 30 ನೀಡಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಇದ್ದರು.