ಅಂಕೋಲಾ: ತಾಲೂಕಿನ ಗಂಗಾವಳಿ ನದಿಗೆ ಸತತ 3 ವರ್ಷಗಳಿಂದ ಕೃತಕ ನೆರೆ ಉಂಟಾಗಿ ಜೀವ ಹಾನಿ ಹಾಗೂ ಆಸ್ತಿಪಾಸ್ತಿಗಳು ನಾಶವಾಗಿವೆ. ಹೀಗಾಗಿ ಕೃತಕ ನೆರೆಗೆ ಕಾರಣವಾಗಿರುವ ಮಂಜಗುಣಿ-ಗಂಗಾವಳಿ ಸೇತುವೆ ನಿರ್ಮಾಣಕ್ಕೆ ಹಾಕಲಾದ ಮಣ್ಣು ತೆಗೆಯದೇ ಇರುವುದು ಮತ್ತು ಐಆರ್‌ಬಿ ಕಂಪನಿಯವರು ಕೋಡ್ಸಣಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಲಾದ ಮಣ್ಣು ತೆಗೆಯದೇ ಇರುವುದು ಮುಖ್ಯ ಕಾರಣವಾಗಿದೆ. ಈ ಕೂಡಲೇ ಬಾರ್ಜ್ ಮೂಲಕವೇ ಮಣ್ಣನ್ನು ತೆಗೆಯುವಂತೆ ಆಗ್ರಹಿಸಿ ಗಂಗಾವಳಿ ನೆರೆ ನಿರಾಶ್ರಿತರ ವೇದಿಕೆ ವತಿಯಿಂದ ಜೂನ್ 17ರಂದು ಬೆಳಿಗ್ಗೆ 10.30ಕ್ಕೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬಾರ್ಜ್ ಮೂಲಕ ಮಣ್ಣು ತೆಗೆಸುವಂತೆ ಆಗ್ರಹಿಸಿ ಜೂನ್ 3ರಂದು ಮಂಜಗುಣಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ಆಗಮಿಸಿ ತಹಸೀಲ್ದಾರರು ಸೇತುವೆ ಗುತ್ತಿಗೆ ಪಡೆದ ಕಂಪನಿಯವರಿಗೆ ನೋಟಿಸ್ ನೀಡಿ ತಕ್ಷಣ ಮಣ್ಣು ತೆರವಿಗೆ ಸೂಚಿಸಿದ್ದರು. ಆದರೆ ಬಾರ್ಜ್ ಮೂಲಕ ತೆಗೆಯದೆ ಹಿಟಾಚಿ ಮೂಲಕ ನೀರಿನ ಮೇಲೆ ಮಣ್ಣನ್ನು ಮಾತ್ರ ತೆಗೆಯುತ್ತಿದ್ದಾರೆ. ಹೀಗಾಗಿ ಹಲವು ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ವೇದಿಕೆಯವರು ಜೂನ್ 10ರಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಾರ್ಜ್ ನಿಂದಲೇ ಮಣ್ಣು ತೆಗೆಯುವಂತೆ ಆಗ್ರಹಿಸಿದ್ದರು.
ಕಂಪನಿಯವರು ಇವ್ಯಾವುದಕ್ಕೂ ಮಣಿಯದೆ ನೀರಿನ ಮೇಲಿನ ಮಣ್ಣನ್ನು ತೆಗೆದು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಇಲ್ಲಿ ಸುಮಾರು 40 ಅಡಿಗಳಷ್ಟು ಆಳದಿಂದ ಸುಮಾರು 150 ಅಡಿ ಅಗಲದಲ್ಲಿ ಮಣ್ಣು ಇರುವುದರಿಂದ ಅದು ಮಳೆಗಾಲದಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುವುದಿಲ್ಲ. ಇದು ತಡೆಗೋಡೆಯಂತಾಗಿ ನೀರು ಸುಲಭವಾಗಿ ಹರಿಯಲಾಗದೆ ಇರುವುದರಿಂದ ಮೇಲ್ಭಾಗದ ಹಲವು ಗ್ರಾಮಗಳ ಮುಳುಗಡೆಗೆ ಕಾರಣವಾಗಲಿದೆ. ಇದೇ ಪರಿಸ್ಥಿತಿ ಕೋಡ್ಸಣಿಯಲ್ಲಿ ನಿರ್ಮಿಸಲಾದ ಸೇತುವೆ ಕೆಳಗೂ ಮಣ್ಣು ಹಾಗೇ ಇದೆ. ಈಗ ಮುಂಗಾರು ದುರ್ಬಲಗೊಂಡಿದ್ದು, ಆಡಳಿತ ವ್ಯವಸ್ಥೆ ಈಗಲಾದರೂ ಕಾರ್ಯಪ್ರವೃತ್ತರಾದರೆ ಬಾರ್ಜ್ ನಿಂದ ತೆಗೆಯುವ ಅವಕಾಶವಿದೆ.
ಈ ಹಿನ್ನೆಲೆಯಲ್ಲಿ ಜೂನ್ 17ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಂಗಾವಳಿ ನದಿ ತಟದ ಜನರು ಆಗಮಿಸುವಂತೆ ಗಂಗಾವಳಿ ನದಿ ನೆರೆ ನಿರಾಶ್ರಿತರ ವೇದಿಕೆಯವರು ತಿಳಿಸಿದ್ದಾರೆ.