• Slide
    Slide
    Slide
    previous arrow
    next arrow
  • ಹಿರಿಯರ ಜ್ಞಾನ,ಅನುಭವಕ್ಕೆ ಎಂದಿಗೂ ಮುಪ್ಪಿಲ್ಲ,ಸರಿಸಾಟಿಯೂ ಯಾವುದಿಲ್ಲ: ಕಾಂತ ಕುರಣೆ

    300x250 AD

    ಕಾರವಾರ:ನಗರದ ಸ್ತ್ರೀಶಕ್ತಿ ಭವನದ ಸಭಾಂಗಣದಲ್ಲಿ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಜರುಗಿದ ಹಿರಿಯ ನಾಗರಿಕರ ಶೋಷಣೆ ವಿರುದ್ಧ ಜಾಗೃತಿ ದಿನದ ಅಂಗವಾಗಿ ಕಾನೂನು ಅರಿವು_ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾಂತ ಕುರಣೆ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು,ಹಿರಿಯ ನಾಗರಿಕರನ್ನು ಗೌರವಿಸಿ, ಅವರ ಜ್ಞಾನ ಮತ್ತು ಅನುಭವದ ಪ್ರಯೋಜನವನ್ನು ಯುವಪೀಳಿಗೆ ಪಡೆಯಬೇಕು, ಹಿರಿಯ ನಾಗರಿಕರು ಸಮಾಜಕ್ಕೆ, ಕುಟುಂಬಕ್ಕೆ ಭಾರವಲ್ಲ, ಅವರ ಜ್ಞಾನ, ಅನುಭವದ ಅವಶ್ಯಕತೆ ಮುಂದಿನ ಪೀಳಿಗೆಗೆ ಉಪಯೋಗಕಾರಿಯಾಗಿದೆ. ಹಿರಿಯರನ್ನು ನಿರ್ಗತಿಕರನ್ನು ಗೌರವಾದರದಿಂದ ಕಾಣಬೇಕು. ಪ್ರತಿಯೊಬ್ಬರಿಗೂ ವಯಸ್ಸಾಗುವುದು ಸಹಜ ಆದರೆ ಅವರ ಜ್ಞಾನ, ಅನುಭವಕ್ಕೆ ಎಂದಿಗೂ ಮುಪ್ಪಾಗುವುದಿಲ್ಲ ಅದಕ್ಕೆ ಸರಿಸಾಟಿಯಾಗಿ ನಿಲ್ಲಲು ಸಾದ್ಯವಿಲ್ಲ ಎಂದು ಹೇಳಿದರು.

    ಡಿವೈಎಸ್‌ಪಿ ವ್ಯಾಲೆಂಟೈನ್ ಡಿಸೋಜಾ ಮಾತನಾಡಿ, ಮಕ್ಕಳಿಗಾಗಿ, ಸಮಾಜಕ್ಕಾಗಿ ಜೀವ ಸವೆಸಿದ ಹಿರಿಯ ಜೀವಗಳನ್ನು ಗೌರವಪೂರ್ವಕವಾಗಿ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿರಿಯ ನಾಗರಿಕರ ಬಗ್ಗೆ ಗಮನ ನೀಡುವುದು ಸಮಾಜದ ಆದ್ಯತೆಯಾಗಬೇಕು. ಹಿರಿಯರು ಸಹ ತಮ್ಮ ಮುಂದಿನ ಜೀವನಕ್ಕಾಗಿ ಸ್ವಲ್ಪ ಉಳಿತಾಯ ಮಾಡಿಟ್ಟುಕೊಳ್ಳಬೇಕು ಅದರಿಂದ ಸ್ವಾಭಿಮಾನದಿಂದ ಬದುಕಲು ಸಹಾಯವಾಗುತ್ತದೆ. ನಿಮ್ಮ ಸುತ್ತಮುತ್ತ ಯಾರೇ ನಿರ್ಗತಿಕ ಅಥವಾ ನಿರ್ಲಕ್ಷಿತ ವಯೋವೃದ್ಧರು ಕಂಡುಬಂದಲ್ಲಿ ಅವರ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು. ಇದರಿಂದ ಅವರಿಗೆ ಬೇಕಾದ ಸಹಾಯ, ಅನುಕೂಲವನ್ನು ಇಲಾಖೆ ವತಿಯಿಂದ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರವಿಂದ ಜಿ.ನಾಯಕ ಮಾತನಾಡಿ, ಹಿರಿಯ ನಾಗರಿಕರ ಶೋಷಣೆ ವಿರುದ್ಧದ ದಿನಾಚರಣೆ ಮಾಡುತ್ತಿರುವುದು ಸಮಾಜದ ಒಂದು ದುರಂತವೆಂದಲೇ ಹೇಳಬೇಕು. ಹಿರಿಯ ನಾಗರಿಕರನ್ನು ಗೌರವಾದರದಿಂದ ಕಾಣುವುದು ನಮ್ಮ ಕರ್ತವ್ಯ ಆದರೆ ಸಮಾಜದಲ್ಲಿ ಹಿರಿಯರನ್ನು ಶೋಷಣೆ ಮಾಡುತ್ತಿರುವದನ್ನು ಕಂಡು ಸರಕಾರವೇ ಕಾಯ್ದೆಯನ್ನು ಜಾರಿಗೆ ತಂದು ರಕ್ಷಿಸಬೇಕಾದ ಅನಿವಾರ್ಯತೆ ಬಂದಿದೆ. ಪ್ರತಿಯೊಬ್ಬರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯೋಣ. ಅವರ ರಕ್ಷಣೆ ಕಾಳಜಿಯ ಜವಾಬ್ದಾರಿಯನ್ನು ವಹಿಸಿಕೊಳ್ಳೋಣ ಎಂದು ಹೇಳಿದರು.

    ಹಿರಿಯ ವಕೀಲ ಆರ್.ವಿ.ಭಟ್ ಉಪನ್ಯಾಸ ನೀಡಿ, ಹಿರಿಯ ನಾಗರಿಕರನ್ನು ಪಾಲನೆ- ಪೋಷಣೆ ಮಾಡುವುದು ಮಕ್ಕಳ ಹಾಗೂ ಸಂಬಂಧಿಕರ ಕರ್ತವ್ಯವಾಗಿದ್ದು, ಇದರಲ್ಲಿ ಏನಾದರೂ ತಪ್ಪಿದಲ್ಲಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಿರಿಯರು ಮಕ್ಕಳಿಗೆ ಆಸ್ತಿಯನ್ನು ಕೊಡುಗೆ ನೀಡುವ ಬದಲಾಗಿ ತಮ್ಮ ಜೀವಿತ ಕಾಲದವರೆಗೂ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಳ್ಳಬೇಕು ಇದರಿಂದ ತಮ್ಮ ಮುಪ್ಪಿನ ಜೀವನವನ್ನು ಹಾಯಾಗಿ ಕಳೆಯಬಹುದು, ಯಾವುದೇ ರೀತಿಯ ಶೋಷಣೆಗೆ ಅವಕಾಶವಿರುವುದಿಲ್ಲ ಎಂದು ಹೇಳಿದರು.

    300x250 AD

    ಹಿರಿಯ ನಾಗರಿಕರನ್ನು ಪೋಷಿಸದೇ ಅಪರಿಚಿತ ಸ್ಥಳದಲ್ಲಿ ಬಿಟ್ಟುಬರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕೃತ್ಯಕ್ಕೆ 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದು. 10 ಜನರ ತಾಯಿ ಬೀದಿಲಿ ಬಿದ್ದು ಸಾಯಿ ಎಂಬಂತೆ ಸಮಾಜದಲ್ಲಿ ಹಿರಿಯರ ಶೋಷಣೆ ಆಗುತ್ತಿದೆ, ಶೋಷಣೆ ವಿರುದ್ಧ ಪ್ರತಿಭಟಿಸುವ ಗುಣ ಬೆಳೆಸಿಕೊಳ್ಳಬೇಕು. ಹಿರಿಯ ನಾಗರಿಕರು ಸಹ ಮಕ್ಕಳೊಂದಿಗೆ ಹೊಂದಾಣಿಕೆಯಿಂದ ಹೋಗುವ ಗುಣ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ವಯಸ್ಸು ಕೇವಲ ಸಂಖ್ಯೆಯಷ್ಟೇ ನೀವು ನಿಮ್ಮ ಹೃದಯದಿಂದ ಯುವಕರು ಎಂದು ಭಾವನೆ ಬೆಳೆಸಿಕೊಳ್ಳಬೇಕು. ಆವಾಗ ನೀವೂ ಯಾರಿಗೂ ಭಾರವೆಂದೆನಿಸುವುದಿಲ್ಲ ಎಂದು ಹೇಳಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಮೌಲ್ಯಗಳ ಕುಸಿತದ ಕಾರಣದಿಂದ ಹಿರಿಯ ನಾಗರೀಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಮಕ್ಕಳನ್ನು ಬೆಳೆಸುವ ಪದ್ಧತಿ ದೋಷಪೂರಿತವಾಗಿದ್ದರಿಂದ ಇಂತಹ ಶೋಷಣಾ ಪ್ರವೃತ್ತಿ ಬೆಳೆಯಲು ಹಾಗೂ ಹಿರಿಯರನ್ನು ಗೌರವಿಸದೇ ಇರಲು ಮೂಲ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸರಕಾರವೂ ಸಹ ಹಿರಿಯ ನಾಗರೀಕರಿಗೆ ನೆರವು ನೀಡುವುದು ತುರ್ತು ಅಗತ್ಯವಾಗಿದೆ, ಹಿರಿಯ ನಾಗರೀಕರು ಸರಕಾರದ ಯೋಜನೆಯ ಲಾಭವನ್ನು ಪಡೆದು ಸ್ವಾಭಿಮಾನದಿಂದ ಬಾಳುವಂತಾಗಬೇಕು ಎಂದು ಹೇಳಿದರು.

    ಕಾರ್ಯಕ್ರಮವನ್ನು ಹೇಮಲತಾ ದಾಂಡೇಲ್ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಲಲಿತಾ ಪ್ರಾರ್ಥಿಸಿದರು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಭಟ್ ಸ್ವಾಗತಿಸಿದರು. ಗೀತಾ ಸಾಳಸ್ಕರ್ ವಂದಿಸಿದರು. ವಿವಿಧ ಇಲಾಖಾ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top