ಕಾರವಾರ: ನಗರದಲ್ಲಿ ಸದ್ಯ ಭಾಷಾ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಹಿಂದಿಯಲ್ಲಿ ಬರೆಯಲಾಗಿದ್ದ ಕೊಂಕಣಿ ತರ್ಜುಮೆಯ ವಾರ್ಡ್ ಹೆಸರುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಕಾರ್ಯಕರ್ತರು ಮಸಿ ಬಳಿದಿರುವುದಕ್ಕೆ ಸಿಟ್ಟಿಗೆದ್ದಿರುವ ಕೊಂಕಣಿ ಭಾಷಿಗರು, ಬುಧವಾರ ಬ್ಲ್ಯಾಕ್ ಡೇ ಆಚರಿಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ನಗರ ವ್ಯಾಪ್ತಿಯ ವಾರ್ಡ್ ಗಳ ಹೆಸರುಗಳನ್ನು ನಗರಸಭೆಯಿಂದ ಕನ್ನಡ ಮತ್ತು ಹಿಂದಿಯಲ್ಲಿ ಬರೆಯಲಾಗಿತ್ತು. ವಾರ್ಡ್ ಹೆಸರುಗಳನ್ನು ಕೊಂಕಣಿಗೆ ತರ್ಜುಮೆ ಮಾಡಿ ಹಿಂದಿಯಲ್ಲಿ ನಾಮಫಕಗಳನ್ನ ಬರೆಯಲಾಗಿತ್ತು. ಅದನ್ನು ತೆರವು ಮಾಡುವಂತೆ ಕರವೇ ರಾಜ್ಯಾಧ್ಯಕ್ಷ ಪೌರಾಯುಕ್ತ ಆರ್.ಪಿ.ನಾಯ್ಕ ಅವರಿಗೆ ಆಗ್ರಹಿಸಿ ಮೂರ್ನಾಲ್ಕು ದಿನ ಕಳೆದರೂ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಹಿಂದಿ ಹೆಸರುಗಳಿಗೆ ಮಸಿ ಬಳಿದಿದ್ದರು. ಇದರಿಂದಾಗಿ ಸಿಟ್ಟಿಗೆದ್ದಿರುವ ಕೊಂಕಣಿ ಭಾಷಿಗರು, ಅದರಲ್ಲೂ ಕೊಂಕಣಿ ಮಂಚ್- ಕಾರವಾರ ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿರುವ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬ್ಲ್ಯಾಕ್ ಡೇ ಆಚರಿಸಿದ್ದಾರೆ.
ಮಸಿ ಬಳಿದವರ ವಿರುದ್ಧ ದೂರು:ವಾರ್ಡ್ ಗಳ ನಾಮಫಲಕಗಳಲ್ಲಿನ ಹಿಂದಿ ಹೆಸರುಗಳಿಗೆ ಮಸಿ ಬಳಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರವಾರದ ರಾಜೇಶ ನಾಯ್ಕ ನಗರ ಠಾಣಾ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ.
ನಗರಸಭೆಯಿಂದ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಅರ್ಥ ಬರುವ ಹಾಗೆ ಬರೆದ ನಾಮಫಲಕಗಳಿಗೆ ಕಿಡಿಗೇಡಿಗಳು ಮಸಿ ಬಳಿದಿದ್ದು, ಕೊಂಕಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಇದರಿಂದಾಗಿ ಸರಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಹೀಗಾಗಿ ಮಸಿ ಬಳಿದ ಪ್ರವೀಣ ಕೊಠಾರಿ, ನಾಗರಾಜ ಶೇಟ್, ಉದಯ ನಾಯ್ಕ, ಹನೀಫ್ ಎನ್ನುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷವೆಂದರೆ, ರಾಜೇಶ ನಾಯ್ಕ ಎನ್ನುವವರು ಕನ್ನಡಪರ ಸಂಘಟನೆಗಳನ್ನ ಕಟ್ಟಿಕೊಂಡು ಈಗಲೂ ಕಾರವಾರದಲ್ಲಿ ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮಸಿ ಬಳಿದ ಕನ್ನಪರ ಸಂಘಟನೆಗಳ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಕನ್ನಡ ಫಲಕಗಳಿಗೂ ಮಸಿ ಬಳಿಯುವ ಎಚ್ಚರಿಕೆ:
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ವಾರ್ಡ್ ಗಳ ನಾಮಫಲಕಗಳಲ್ಲಿ ಕೊಂಕಣಿ ತರ್ಜುಮೆಯ ಹಿಂದಿ ಅಕ್ಷರಗಳನ್ನು ಬರೆದಿರುವುದಕ್ಕೆ ಆಕ್ರೋಶಗೊಂಡು ಮಸಿ ಬಳಿದಿದ್ದಕ್ಕೆ ಪ್ರತಿರೋಧವಾಗಿ ಕನ್ನಡದ ನಾಮಫಲಕಗಳಿಗೆ ಮಸಿ ಬಳಿಯುವುದಾಗಿ ಕೊಂಕಣಿ ಮಂಚ್- ಕಾರವಾರ ಫೇಸ್‌ಬುಕ್ ಖಾತೆಯ ಅಡ್ಮಿನ್ ಎಚ್ಚರಿಕೆ ನೀಡಿದ್ದಾನೆ. ಮಸಿ ಬಳಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ, ಬಿಡಲಿ, ನಾವು ಎಲ್ಲಾ ಕನ್ನಡ ನಾಮಫಲಕಗಳಿಗೆ ಮಸಿ ಬಳಿಯುತ್ತೇವೆ ಎಂದು ಪೋಸ್ಟ್ ಮಾಡಿದ್ದಾನೆ.
ಘಟನೆಯ ಕುರಿತಂತೆ ಕೊಂಕಣಿ ಮಂಚ್- ಕಾರವಾರ ಫೇಸ್‌ಬುಕ್ ಗ್ರೂಪ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು, ಕೊಂಕಣಿಗರು ಕನ್ನಡಿಗರಿಗೆ ನಾವೇನೆಂದು ತೋರಿಸಬೇಕು ಎಂಬಿತ್ಯಾದಿ ಪೋಸ್ಟ್ ಗಳನ್ನು ಮಾಡಲಾಗಿದೆ. ಅದಕ್ಕಾಗಿ ಶುಕ್ರವಾರ (ಜೂ.17) ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಅಸಂಖ್ಯ ಸಂಖ್ಯೆಯಲ್ಲಿ ಕೊಂಕಣಿ ಭಾಷಿಗರು ಸೇರುವಂತೆ ಕರೆ ನೀಡಲಾಗಿದೆ.