
ಅಂಕೋಲಾ: ಮಳೆಯ ಕಾರಣಕ್ಕೆ ನೆರೆಗೆ ತುತ್ತಾಗಿದ್ದ ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ, ಕೋನಾಳ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಶ್ರೀಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಹವ್ಯಕ ಜಾಗೃತ ಕಾರ್ಯಪಡೆಯ ನೇತೃತ್ವದಲ್ಲಿ ಭಾನುವಾರ ಅಕ್ಕಿ, ಬೆಲ್ಲ, ದಿನಸಿ ವಿತರಿಸಲಾಯಿತು.
ಭಾನುವಾರ ಮುಂಜಾನೆ ದಿನಸಿಯನ್ನು ಹೊತ್ತು ಎರಡು ವಾಹನದಲ್ಲಿ ಸಾಗಿದ ಕಾರ್ಯಪಡೆಯ ಸದಸ್ಯರು, ಮತ್ತಿಘಟ್ಟದ ದುರ್ಗಮ ಪ್ರದೇಶದಲ್ಲಿ ಸಾಗಿ, ಹಳವಳ್ಳಿಯನ್ನು ತಲುಪಿ ಸುತ್ತಲಿನ ಭಾಗದ ಜಾತಿ-ಭೇದವಿಲ್ಲದೇ ಎಲ್ಲ ವರ್ಗದ ಸಂತ್ರಸ್ತರನ್ನು ಭೇಟಿ ಮಾಡಿ ದಿನಸಿಯನ್ನು ನೀಡುವುದರ ಜೊತೆಗೆ ಮುಳುಗಡೆಯಾದ ಮನೆಗಳನ್ನು ವೀಕ್ಷಿಸಿ, ಸಂತ್ರಸ್ತರ ಯೋಗಕ್ಷೇಮವನ್ನು ವಿಚಾರಿಸಲಾಯಿತು.
ಪರಿಹಾರ ವಿತರಣಾ ಕೆಲಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 4*4 ವಾಹನ ಒದಗಿಸಿಕೊಟ್ಟು ನೆರವಾದರೆ, ಮತ್ತಿಘಟ್ಟ ಗ್ರೀನ್ ರಿವೈನ್ ನ ಮಾಲೀಕ ಪ್ರಮೋದ ವೈದ್ಯ ಕಾರ್ಯಪಡೆಯ ಜೊತೆಗಿದ್ದು ಪರಿಹಾರ ವಿತರಣಾ ಕಾರ್ಯದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಹವ್ಯಕ ಜಾಗೃತ ಕಾರ್ಯಪಡೆ ಸಂಚಾಲಕ ಸಚ್ಚಿದಾನಂದ ಹೆಗಡೆ, ಕಾರ್ಯಕಾರಿ ಮಂಡಳಿ ಸದಸ್ಯರಾದ ರಾಘವ ಭಟ್ಟ ಹಿತ್ಲಳ್ಳಿ, ಸತ್ಯನಾರಾಯಣ ಭಟ್ಟ ವರ್ಗಾಸರ, ಗಣಪತಿ ಮೂಲೆಮನೆ, ಪ್ರಶಾಂತ ಹೆಗ್ಗಾರ, ಸ್ಥಳೀಯ ಪಂಚಾಯತ ಸದಸ್ಯ ನಾರಾಯಣ ಭಟ್ಟ ಸೇರಿದಂತೆ ಇನ್ನಿತರರು ಇದ್ದರು.
ನೆರೆಗೆ ತುತ್ತಾದ ಈ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಿ, ಸಂತ್ರಸ್ತರಿಗೆ ದಿನಸಿ ವಿತರಿಸಿದವರಲ್ಲಿ ಶ್ರೀಸ್ವರ್ಣವಲ್ಲೀ ಮಠದ ಕಾರ್ಯಕರ್ತರೇ ಮೊದಲಾಗಿದ್ದು, ದುರ್ಗಮ ಪ್ರದೇಶದಲ್ಲಿ ಸಾಗಿಬಂದಿದ್ದು ನಿಜಕ್ಕೂ ಶ್ಲಾಘನೀಯವಾಗಿದ್ದು ಎಂದು ಸ್ಥಳೀಯರೊಬ್ಬರು ಅಭಿಪ್ರಾಯಪಟ್ಟರು.
ಉಚಿತ ಮೆಡಿಕಲ್ ಕ್ಯಾಂಪ್:
ಶ್ರೀಸ್ವರ್ಣವಲ್ಲೀ ಶ್ರೀಗಳ ಸೂಚನೆಯ ಮೇರೆಗೆ ಶಿರಸಿ ಐಎಮ್ಎ ಸಹಯೋಗದಲ್ಲಿ ಸಂತ್ರಸ್ತ ಪ್ರದೇಶದ ರೋಗಿಗಳಿಗೆ ಅನುಕೂಲವಾಗುವಂತೆ ಹೆಗ್ಗಾರಿನ ಕಲ್ಪತರು ಸೇವಾ ಸಹಕಾರಿ ಸಂಘದಲ್ಲಿ ಮತ್ತು ಕಲ್ಲೇಶ್ವರದ ಮನೆಯೊಂದರಲ್ಲಿ ನುರಿತ ವೈದ್ಯರಿಂದ ಉಚಿತ ಚಿಕಿತ್ಸೆ ಮತ್ತು ಸಲಹೆಯನ್ನು ನೀಡಲಾಯಿತು. ಈ ಮೆಡಿಕಲ್ ಕ್ಯಾಂಪ್ ನಲ್ಲಿ ಶಿರಸಿಯ ಖ್ಯಾತ ವೈದ್ಯರುಗಳಾದ ಡಾ. ದಿನೇಶ ಹೆಗಡೆ, ಡಾ. ಸುಮನ್ ಹೆಗಡೆ, ಡಾ. ಮಧುಕೇಶ್ವರ ಜಿ ವಿ, ಡಾ. ಜಿ ಎಮ್ ಹೆಗಡೆ, ಡಾ. ಕೃಷ್ಣಮೂರ್ತಿ ರಾಯ್ಸದ್, ಡಾ. ವಿಕ್ರಮ್ ಹೆಗಡೆ, ಡಾ. ವಿಶ್ವನಾಥ ಅಂಕದ, ಜೀವನ್ ಫಾರ್ಮಾದ ವಿನಾಯಕ ಭಾಗ್ವತ್, ದತ್ತಾ ಟ್ರೇಡರ್ಸ್ ನ ಪ್ರಶಾಂತ ಹೆಗಡೆ ಭಾಗಿಯಾಗಿದ್ದರು. ಸುಮಾರು ನೂರಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.