ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ಸ್ಥಳೀಯ ನಟರಾಜ ಎಮ್. ಹೆಗಡೆ ಹಾಗೂ ಗೆಳೆಯರ ಬಳಗದವರು ಸೇರಿ ಸಂಯೋಜಿಸಿದ್ದ ಯಕ್ಷಗಾನ ಹಿಮ್ಮೇಳ ವೈಭವ ಜನಮನ ಸೂರೆಗೊಂಡಿತು.
ಹಿಮ್ಮೇಳ ವೈಭವದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತರು, ವಾದನಕಾರರು ಸೇರಿ ಅಪರೂಪದ ಗಾನ ವೈಭವಕ್ಕೆ ಕಾರಣೀಕರ್ತರಾದರು. ಆರಂಭಿಕ ಗಣಪತಿ ಪದ್ಯದೊಂದಿಗೆ ಕೊನೆಯ ಮಂಗಲ ಹಾಡಿನವರೆಗೂ ಪ್ರತಿಯೊಬ್ಬ ಕಲಾವಿದರು ಕಲಾ ರಸದೂಟದ ವೈವಿಧ್ಯತೆಯನ್ನು ಮೆರೆದರು.
ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ,ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರ್ ಹಾಗೂ ಯುವ ಪ್ರತಿಭೆ ಶ್ರೀರಕ್ಷಾ ಹೆಗಡೆ ಸಿದ್ದಾಪುರರವರು ಪೀಠಿಕೆ, ಸಂವಾದ ಶೃಂಗಾರ ರಸಗಳಲ್ಲಿ ಆಯ್ದ ಪ್ರಸಂಗಗಳ ಹಾಡನ್ನು ವೈಯಕ್ತಿಕವಾಗಿ ಸುಂದರವಾಗಿ ಹಾಡುತ್ತ ಮೂವರು ಭಾಗವತರು ತ್ರಿಗಲ್ ಬಂದಿಯಾಗಿ ಜನಪ್ರಿಯ ಪ್ರಸಂಗದ ಹಾಡುಗಳನ್ನು ಸೊಗಸಾಗಿ ಹಾಡಿ ಅಭಿಮಾನಿಗಳ ಕರತಾಡನಕ್ಕೆ ಭಾಜನರಾದರು.
ತದನಂತರದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಬಂದ ಅಪೇಕ್ಷಿತ ಹಾಡುಗಳನ್ನು ಹಾಡುತ್ತ ಕಲಾ ರಸದೂಟ ಉಣ ಬಡಿಸಿದ್ದು ವಿಶೇಷತೆ. ಭಾಗವತರ ಹಾಡುಗಳಿಗೆ ತಕ್ಕಂತೆ ಮದ್ದಲೆಯಲ್ಲಿ ನಾದಶಂಕರ ಶಂಕರ ಭಾಗವತ ಯಲ್ಲಾಪುರ, ಇನ್ನೊಂದು ಮದ್ದಲೆಯಲ್ಲಿ ಎನ್.ಜಿ.ಹೆಗಡೆ ಉಡುಪಿ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ ಮತ್ತು ಪ್ರಸನ್ನ ಭಟ್ಟ ಹೆಗ್ಗಾರ್‌ರವರುಗಳು ತಮ್ಮ ಕೈಚಳಕದ ಪ್ರದರ್ಶನ ನೀಡಿ ಮತ್ತಷ್ಟು ಮೆರಗು ನೀಡಿದರು. ತ್ರಿಗಲ್ ಬಂದಿಯ ಹಾಡಾಗಿದ್ದ ಕಪಟ ನಾಟಕ ರಂಗ ಹಾಡಿಗೆ ಯಕ್ಷಾಭಿಮಾನಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿದ್ದು ಒಟ್ಟಾರೆ ಕಾರ್ಯಕ್ರಮದ ಯಶಸ್ಸನ್ನು ಸಾಕ್ಷೀಕರಿಸಿತು.
ಇದೇ ಸಂದರ್ಭದಲ್ಲಿ ಐವತ್ನಾಲ್ಕು ವರ್ಷಗಳ ಸುದೀರ್ಘ ಯಕ್ಷ ಇತಿಹಾಸ ಹೊಂದಿದ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರು ಆದ ರಾಮಕೃಷ್ಣ ಹೆಗಡೆ ಹಿಲ್ಲೂರ್‌ರವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.
ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉದ್ಯಮಿ ಉಪೇಂದ್ರ ಪೈ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಆರ್.ಹೆಗಡೆ ತ್ಯಾಗಲಿ, ಸ್ಥಳೀಯ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ವಿನಾಯಕ ಸುಬ್ರಾಯ ಭಟ್ಟ ಮತ್ತಿತರರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘಟಕ ನಟರಾಜ ಹೆಗಡೆ ಸ್ವಾಗತಿಸಿ, ವಂದಿಸಿದರು.
ನಾಣಿಕಟ್ಟಾದಲ್ಲಿ ಜನಮನ ಗೆದ್ದ ಕಪಟನಾಟಕ ರಂಗ
