ಶಿರಸಿ: ಹಳಿಯಾಳದ ಶಾಸಕರು ಹಾಗೂ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಅವರನ್ನು ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯಕರ್ತರು ಶಿರಸಿಯಲ್ಲಿ ಜೂ.15 ರಂದು ಭೇಟಿ ಮಾಡಿ ಬೇಡ್ತಿ-ವರದಾ ನದೀ ಜೋಡಣೆ ಯೋಜನೆಯ ದುಷ್ಪರಿಣಾಗಳ ಬಗ್ಗೆ ಮಾಹಿತಿ ನೀಡಿದರು. ಆರ್.ವಿ ದೇಶಪಾಂಡೆ ಅವರು “ಮಂಚೀಕೇರಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಬೇಡ್ತಿ ಸಂರಕ್ಷಣಾ ಆಂದೋಲನಕ್ಕೆ ನನ್ನ ಬೆಂಬಲವಿದೆ.” ಎಂದರು.
“ವಿಧಾನ ಸಭಾಧ್ಯಕ್ಷರು, ಜಿಲ್ಲೆಯ ಸಚಿವರು ಶಾಸಕರ ಜೊತೆ ಮುಖ್ಯಮಂತ್ರಿ ಭೇಟಿ ಮಾಡಿ ಬೇಡ್ತಿ ಯೋಜನೆ ಕೈಬಿಡಲು ಒತ್ತಾಯಿಸುತ್ತೇನೆ. ಬೇಡ್ತಿ-ವರದಾ ನದೀ ಜೋಡಣೆ ರಾಷ್ಟ್ರೀಯ ಯೋಜನೆ ಆಗುವದರಿಂದ ಕೇಂದ್ರ ಸರ್ಕಾರಕ್ಕೂ ಸಂಪರ್ಕ ಮಾಡಬೇಕು. ದುಷ್ಪರಿಣಾಮಗಳ ಬಗ್ಗೆ ಹೇಳಬೇಕು”ಎಂದು ಆರ್.ವಿ. ದೇಶಪಾಂಡೆಯವರು ಬೇಡ್ತಿ ಸಮಿತಿ ಪ್ರಮುಖರಿಗೆ ತಿಳಿಸಿದರು.
ಬೇಡ್ತಿ ಸಮಿತಿಯ ಅನಂತ ಹೆಗಡೆ ಅಶೀಸರ ದೇಶಪಾಂಡೆ ಅವರಿಗೆ ಡಿಪಿಆರ್ ಹಾಗೂ ತಜ್ಞರ ವರದಿ ಮಂಚೀಕೇರಿ ಸಮಾವೇಶದ ನಿರ್ಣಯಗಳ ಲಿಖಿತ ಮನವಿ ನೀಡಿ ಎತ್ತಿನಹೊಳೆ ಯೋಜನೆಯ ವೈಫಲ್ಯತೆಯ ವಿವರ ನೀಡಿದರು. ಈ ಸಂದರ್ಭದಲ್ಲಿ ನಾರಾಯಣ ಗಡೀಕೈ, ಡಾ|| ಕೊರ್ಸೆ, ದೀಪಕ ದೊಡ್ಡೂರ, ಜಿ.ವಿ. ಹೆಗಡೆ ಬಿಸ್ಲಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ಬೇಡ್ತಿ ಸಂರಕ್ಷಣಾ ಆಂದೋಲನಕ್ಕೆ ದೇಶಪಾಂಡೆ ಬೆಂಬಲ
