ಕುಮಟಾ: ಶಾಸಕ ದಿನಕರ ಶೆಟ್ಟಿ ಹೇಳಿದಂತೆ ಚುನಾವಣೆ ಬರುವವರೆಗೆ ರಸ್ತೆ ಪೂರ್ಣಗೊಳಿಸುವುದಿಲ್ಲ ಎಂಬ ಮಾತು ಸತ್ಯ. ಬೋಗ್ರಿಬೈಲ್ ರಸ್ತೆಯು ಸುಮಾರು 4 ವರ್ಷ ಕಳೆಯುತ್ತಾ ಬಂದರೂ ಸಹ ಇನ್ನು ತನಕ ರಸ್ತೆಯ ಶೇ 60ರಷ್ಟು ಭಾಗದ ಕಾಮಗಾರಿಯನ್ನೂ ಪೂರ್ಣಗೊಳಿಸದೆ ಜನರಿಗೆ ಕಷ್ಟ ಕೊಡುತ್ತಾ ಬಂದಿದ್ದಾರೆ ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ದೂರಿದರು.
ಕಾಮಗಾರಿ ಸ್ಥಳದಲ್ಲಿ ಮಾತನಾಡಿದ ಅವರು, ಬೋಗ್ರಿಬೈಲ್ ರಸ್ತೆಯು 7.1 ಕಿ.ಮೀ. ರಸ್ತೆಯ ಅಭಿವೃದ್ಧಿ ಎಸ್.ಎಚ್.ಡಿ.ಪಿ ಅಡಿಯಲ್ಲಿ ಸ್ಟೇಟ್ ಹೈವೆ ಡೆವಲೆಪ್‌ಮೆಂಟ್ ಪ್ರಾಜೆಕ್ಟ್ ಅಡಿಯಲ್ಲಿ 7 ಕೋಟಿಗೂ ಹೆಚ್ಚು ಕಾಮಗಾರಿಗೆ ಟೆಂಡರ್ ಕರೆದು 2018- 19ನೇ ಸಾಲಿನಲ್ಲಿ ಆರಂಭಗೊಂಡಿದೆ. ಆದರೆ ಶಾಸಕ ದಿನಕರ ಶೆಟ್ಟಿ ಹೇಳಿದಂತೆ ಚುನಾವಣೆ ಬರುವವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಿಲ್ಲ. ಜೊತೆಗೆ ಬೋಗ್ರಿಬೈಲ್ ಕಾಮಗಾರಿಯು ಅತ್ಯಂತ ಕಳಪೆಯಾಗಿದೆ. ಕಳೆದ ವರ್ಷ ಈ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ಪಿಡಬ್ಲೂಡಿಯವರ ಗಮನಕ್ಕೂ ತರಲಾಗಿದೆ ಎಂದರು.
ಈ ಕಳಪೆ ಕಾಮಗಾರಿಗೆ ಕಾರಣವೇನು ಎಂದು ತನಿಖೆ ನಡೆಸುವಂತೆ ಹಾಗೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸಬೇಕು ಎಂದು ಎಸಿಬಿಗೆ ನಾವು ಮನವಿಯನ್ನು ಕೊಡುತ್ತಿದ್ದೇವೆ. ಕಾರ್ಯನಿರ್ವಾಹಕ ಇಂಜಿನೀಯರ್ ಹಾಗೂ ಸ್ಥಳೀಯ ಇಂಜೀನಿಯರ್ ಅವರಿಗೂ ಮನವಿ ನೀಡುತ್ತಿದ್ದೇವೆ. ಮತ್ತೆ ಈ ರಸ್ತೆಗೆ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಕಾಮಗಾರಿಗೆ ಬಳಸಲು ತಂದರೆ ನಾವು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೂರೂರು ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ, ಶಿವರಾಂ ಮಡಿವಾಳ, ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಗ್ರಾಮಸ್ಥರಾದ ಟಿ.ಟಿ.ಹೆಗಡೆ, ಕಲ್ಲಬ್ಬೆ ಹಾಗೂ ಮೂರುರು ಭಾಗದ ಗ್ರಾಮಸ್ಥರು ಇದ್ದರು.