ಕುಮಟಾ: ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ ಸುಧಾಕರ ನಾಯಕ ನಮ್ಮ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿರುವ ಅಲ್ಯುಮ್ನಿ ಅಸೋಸಿಯೇಷನ್ ಮೂಲಕ ಅವ್ಯವಹಾರ ಎಸಗಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು ಎಂದು ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷದಲ್ಲಿ ಸಂಘಟಿತವಾದ ಡಾ.ಬಾಳಿಗಾ ಕಲಾ ಮತ್ತು ವಿಜ್ಞಾನ ಅಲ್ಯುಮ್ನಿ ಟ್ರಸ್ಟಿನ ಟ್ರಸ್ಟಿ ಮಹಾರಾಷ್ಟ್ರ ನಿವಾಸಿ ರಾಮಾ ಶಾನಭಾಗ ಎಂಬುವವರು ನೀಡಿದ ದೂರಿನಂತೆ ಅವ್ಯವಹಾರದ ಪ್ರಕರಣ ದಾಖಲಾಗಿದೆ. ಈ ಮೂಲಕ ಅಲ್ಯುಮ್ನಿ ಟ್ರಸ್ಟಿನವರು ಜಿಲ್ಲೆಯ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಕೆನರಾ ಕಾಲೇಜು ಸೊಸೈಟಿಯ ಈವರೆಗಿನ ಸಾಧನೆ, ಇತಿಹಾಸ, ಅಭಿಮಾನ, ಗೌರವ, ವಿಶ್ವಾಸಾರ್ಹತೆಯ ಮೇಲೆ ಕಪ್ಪು ಚುಕ್ಕೆ ಹಾಕಿದ್ದಾರೆ. ಇಂಥ ಸಂಸ್ಥೆಯನ್ನು ಕಟ್ಟಲು ಸಾವಿರಾರು ಜನ ಬೆವರು ಸುರಿಸಿದ್ದಾರೆ. ಆದರೆ ಇದೆಲ್ಲವನ್ನೂ ಒಂದು ಕ್ಷಣದಲ್ಲಿ ಕೆಡಿಸುವ ಪ್ರಯತ್ನ ನಡೆದಿದೆ. ಕಾರ್ಯದರ್ಶಿ ಸುಧಾಕರ ನಾಯಕ ಅವರ ಮೇಲೆ ಆರೋಪ ಬಂದ ತಕ್ಷಣ ಸೊಸೈಟಿಯ ಆಡಳಿತ ಅವರನ್ನು ತಕ್ಷಣದಿಂದ ಅಮಾನತಿನಲ್ಲಿಟ್ಟು ಸತ್ಯಾಸತ್ಯತೆಯನ್ನು ಒರೆಹಚ್ಚುವ ಕೆಲಸ ಮಾಡಿದೆ ಎಂದರು.
ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೀತಿ ಭಂಡಾರ್‌ಕರ್ ಮಾತನಾಡಿ, ಕಮಲಾ ಬಾಳಿಗಾ ಕಾಲೇಜಿನ ಅಲ್ಯುಮ್ನಿ ಅಸೋಶಿಯೇಶನ್ ಖಾತೆಯು 1979ರಲ್ಲಿಯೇ ಆಗಿದೆ. ಅದರಲ್ಲಿ ಪ್ರಾಚಾರ್ಯರು ಅಧ್ಯಕ್ಷರಿದ್ದು, ಅಲ್ಯುಮ್ನಿ ಅಸೋಶಿಯೇಶನ್‌ಗೆ ಪ್ರತ್ಯೇಕ ಕಾರ್ಯದರ್ಶಿ ಇದ್ದಾರೆ. ಕೆನರಾ ಕಾಲೇಜ್ ಸೊಸೈಟಿಯ ಕಾರ್ಯದರ್ಶಿ ಇರಲಿಲ್ಲ. ಇತ್ತೀಚಿಗೆ ಎರಡು ವರ್ಷದ ಹಿಂದೆ ಸೊಸೈಟಿಯ ಕಾರ್ಯದರ್ಶಿಯೇ ಇದಕ್ಕೆ ಕಾರ್ಯದರ್ಶಿಯಾಗಿದ್ದು, ಇತ್ತೀಚಿಗಷ್ಟೇ ಖಾತೆಯ ಬದಲಾವಣೆಯಾಗಿದೆ ಎಂದರು.
ಕಲಾ ಮತ್ತು ವಿಜ್ಞಾನ ವಿಭಾಗದ ಪ್ರಾಚಾರ್ಯ ಪಿ.ಕೆ.ಭಟ್ಟ, ವಾಣಿಜ್ಯ ಕಾಲೇಜು ಪ್ರಾಚಾರ್ಯ ಎಸ್.ವಿ.ಶೇಣ್ವಿ ಅವರು ನಮ್ಮಲ್ಲೂ ಅಲ್ಯುಮ್ನಿ ಅಸೋಸಿಯೇಷನ್ ಖಾತೆಗಳಿದ್ದರೂ ಹಣಕಾಸಿನ ಅವ್ಯವಹಾರಗಳು ನಡೆದಿಲ್ಲ. ಪ್ರತಿಯೊಂದು ವ್ಯವಹಾರಕ್ಕೂ ದಾಖಲೆಗಳಿವೆ ಎಂದರು.
ಸೊಸೈಟಿಯ ಸದಸ್ಯ ಅತುಲ ಕಾಮತ, ಕೆನರಾ ಕಾಲೇಜು ಸೊಸೈಟಿಯಡಿ ಹಲವು ಅಲ್ಯುಮ್ನಿ ಅಸೋಸಿಯೇಷನ್‌ಗಳನ್ನು ಕಾರ್ಯದರ್ಶಿ ಸುಧಾಕರ ನಾಯಕ ಹುಟ್ಟು ಹಾಕಿದ್ದಾರೆ. ಆಮೂಲಕ ಅವ್ಯವಹಾರ ಎಸಗಲಾಗಿದೆ ಎಂಬುದು ಶುದ್ಧಸುಳ್ಳು ಎಂದರು.
ಪ್ರಮುಖರಾದ ವಿ.ಎಚ್.ನಾಯಕ ಬೆಣ್ಣೆ, ಎ.ಪಿ.ಕಾಮತ, ಆರ್.ಬಿ.ಕಾಮತ, ಎನ್.ಆರ್.ಶಾನಭಾಗ, ಹನುಮಂತ ಶಾನಭಾಗ, ವಿ.ಎಂ.ಪೈ ಇನ್ನಿತರರು ಇದ್ದರು.
ನಮ್ಮ ಸಂಸ್ಥೆಯ ಅಲ್ಯುಮ್ನಿ ಅಸೋಸಿಯೇಷನ್ ಖಾತೆಯಲ್ಲಿ ಕೇವಲ 82,290 ರೂ.ಗಳಿದೆ. ಸುಧಾಕರ ನಾಯಕ ಕಾರ್ಯದರ್ಶಿ ಹುದ್ದೆ ಸ್ವೀಕರಿಸಿದ ಬಳಿಕ ಈ ಖಾತೆಯಿಂದ ವ್ಯವಹರಿಸಿಯೇ ಇಲ್ಲ. ಆದರೆ 75 ಲಕ್ಷಕ್ಕೂ ಹೆಚ್ಚು ಅವ್ಯವಹಾರದ ಆರೋಪ ಮಾಡಲಾಗಿದೆ. ಇಂಥ ಗಂಭೀರ ಸುಳ್ಳು ಆರೋಪ ಮಾಡುವ ಮೊದಲು ಕನಿಷ್ಟ ಪಕ್ಷ ಪ್ರಾಚಾರ್ಯರನ್ನಾದರೂ ಸಂಪರ್ಕಿಸದೇ ಇರುವುದು ಮತ್ತು ನಮ್ಮನ್ನೂ ಅವ್ಯವಹಾರದ ಭಾಗಿಯಾಗಿ ಬಿಂಬಿಸಿರುವುದು ನೋವನ್ನುಂಟು ಮಾಡಿದೆ.–· ಪ್ರೀತಿ ಭಂಡಾರ್‌ಕರ್, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು