ಕಾರವಾರ: ಕಳೆದ ಮೇ 25 ರಂದು ಪ್ರಾರಂಭಗೊಂಡಿದ್ದ ಮಾಲಾದೇವಿ ಮೈದಾನದ ಅಭಿವೃದ್ಧಿ ಕಾಮಗಾರಿ ಮಳೆಯ ಅಬ್ಬರಕ್ಕೆ ಆರಂಭದಲ್ಲೇ ಸ್ಥಗಿತಗೊಂಡಿದೆ. ಕಾಮಗಾರಿ ಕಾರಣಕ್ಕೆ ಕಾರವಾರದ ಕ್ರೀಡಾಪಟುಗಳ ಪಾಲಿಗೆ ಏಕೈಕ ಆಶ್ರಯತಾಣವಾಗಿದ್ದ ಮಾಲಾದೇವಿ ಮೈದಾನ ಸಂಪೂರ್ಣ ಹಾಳಾಗಿದ್ದು ಇದರಿಂದ ಈ ಮೈದಾನದಲ್ಲಿ ಆಟ ಆಡುವ ಕ್ರೀಡಾಪಟುಗಳು, ವಾಕಿಂಗ್ ಬರುವ ವೃದ್ಧರು, ದೇವಸ್ಥಾನಕ್ಕೆ ಬರುವ ಶ್ರದ್ಧಾಳುಗಳು ಪರದಾಡುವಂತಾಗಿದೆ. ಕಾಮಗಾರಿ ಕಾರಣಕ್ಕೆ ಮಾಲಾದೇವಿ ಮೈದಾನ ಸದ್ಯಕ್ಕೆ ಹಾಳಾದರೂ, ಮುಂದೆ ಅಭಿವೃದ್ಧಿಗೊಳ್ಳಲಿದೆ ಎಂದು ಭಾವನೆಯಲ್ಲಿದ್ದ ಜನರಿಗೆ ಅತ್ತ ಕಾಮಗಾರಿಯೂ ಅರ್ಧಕ್ಕೆ ನಿಂತಿರುವುದು, ಇತ್ತ ಮೈದಾನವೂ ಹಾಳಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮೈದಾನದ ದುಸ್ಥಿತಿ ಕಂಡು ಈ ವಾರ್ಡಿನ ಮಾಜಿ ಸದಸ್ಯ ರತ್ನಾಕರ ನಾಯ್ಕ ಹಾಗೂ ಹಾಲಿ ಸದಸ್ಯ ಪ್ರೇಮಾನಂದ ಗುನಗಾ ಒಂದಾಗಿ ಧ್ವನಿ ಎತ್ತಿದ್ದಾರೆ. ಇನ್ನೂ ಐದಾರು ತಿಂಗಳು ಕಾಮಗಾರಿ ಅಸಾಧ್ಯವಾಗಿದ್ದು, ಗುತ್ತಿಗೆದಾರರು ಕೂಡಲೇ ಹಾಳುಗೆಡವಿರುವ ಮೈದಾನವನ್ನು ಕ್ರೀಡಾಪಟುಗಳು ಆಟ ಆಡಲು ಅನುಕೂಲವಾಗುವಂತೆ ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ. ಮಾಲಾದೇವಿ ಮೈದಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಡಿಪಾಯ ನಿರ್ಮಿಸಲು ತೋಡಿದ್ದ ಹೊಂಡವನ್ನು ಮತ್ತೆ ಮಣ್ಣು ತುಂಬಿ ಮುಚ್ಚಲಾಗಿದೆ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಎಇಇ ರಾಮಚಂದ್ರ ಗಾಂವಕರ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ, ಮಳೆ ನೀರು ಹೊಂಡದಲ್ಲಿ ತುಂಬಿಕೊಂಡಿದ್ದು, ಜನ ಜಾನುವಾರು ಬಿದ್ದು ಅವಘಡ ಸಂಭವಿಸಬಾರದು ಎಂದು ಹೊಂಡ ಮುಚ್ಚಿರುವುದಾಗಿ ತಿಳಿಸುತ್ತಾರೆ. ಮಾಲಾದೇವಿ ಮೈದಾನದ ಅಡಿಯಲ್ಲಿ ಉಸುಕು ಜಾಸ್ತಿ ಪ್ರಮಾಣದಲ್ಲಿದ್ದು ನೀರು ತುಂಬಿಕೊಳ್ಳುತ್ತಿದೆ. ಹೀಗಾಗಿ ಮಳೆಗಾಲ ಮುಗಿದ ಮೇಲೆ ಕಾಮಗಾರಿ ನಡೆಸುವುದಾಗಿ ತಿಳಿಸುತ್ತಾರೆ.
ಲೋಕೋಪಯೋಗಿಯಂತಹ ಇಂಜಿನಿಯರಿಂಗ್ ಇಲಾಖೆಗೆ ಕಾಮಗಾರಿ ನಡೆಸುವ ಭೂಮಿ ಎಂತಹದ್ದು, ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಕಾಮಗಾರಿ ನಡೆಸಬಹುದೇ ಬೇಡವೇ ಎಂಬ ಸಾಮಾನ್ಯ ಪರಿಜಾನವೂ ಇರುವುದಿಲ್ಲವೇ ಎಂಬ ಪ್ರಶ್ನೆ ಇದರಿಂದ ಮೂಡುವಂತಾಗಿದೆ.
ಮಳೆಗಾಲ ನಿಂತರೂ, ನೀರು ಒಣಗುವವವರೆಗೆ ಕಾಮಗಾರಿ ಅಸಾಧ್ಯ ಎನ್ನುವ ಆತಂಕವನ್ನು ನಗರಸಭೆಯ ಸದಸ್ಯ ಪ್ರೇಮಾನಂದ ಗುನಗಾ ಹಾಗೂ ಮಾಜಿ ಸದಸ್ಯ ರತ್ನಾಕರ ನಾಯ್ಕ ಇಬ್ಬರೂ ವ್ಯಕ್ತಪಡಿಸಿದ್ದು, ಇನ್ನೂ ಐದಾರು ತಿಂಗಳು ಕಾಮಗಾರಿ ಪ್ರಾರಂಭವಾಗುವುದ ಸಂಶಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಕಾಮಗಾರಿ ಅಸಾಧ್ಯ ಎಂದು ಗೊತ್ತಿದ್ದರೂ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಹೊಂಡ ತೋಡಿ ಈಗ ಮುಚ್ಚಲಾಗಿದೆ ಎಂದು ರತ್ನಾಕರ ನಾಯ್ಕ ಆರೋಪಿಸಿದ್ದಾರೆ. ಕೂಡಲೇ ಗುತ್ತಿಗೆದಾರರು ಮಾಲಾದೇವಿ ಮೈದಾನವನ್ನು ಮೊದಲಿನಂತೆ ಸರಿಪಡಿಸಿ ಕ್ರೀಡಾಪಟುಗಳು ಆಟ ಆಡಲು ಮುಕ್ತಗೊಳಿಸಬೇಕು ಎಂದು ಪ್ರೇಮಾನಂದ ಗುನಗಾ ಹಾಗೂ ರತ್ನಾಕರ ನಾಯ್ಕ್ ಆಗ್ರಹಿಸಿದ್ದಾರೆ.