• Slide
  Slide
  Slide
  previous arrow
  next arrow
 • ಸಂಗೀತದಲ್ಲಿ ಚಿನ್ನದ ಪದಕ ಪಡೆದ ಸಂಗೀತಾ

  300x250 AD

  ಹೊನ್ನಾವರ: ತಾಲೂಕಿನ ಕಡಗೇರಿಯ ಸಂಗೀತಾ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಎಂ.ಎ. ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ. ಆದರೆ ಸಾಧಿಸುವ ಛಲಬೇಕು ಎನ್ನುವುದಕ್ಕೆ ನೈಜ ಉದಾಹರಣೆಯಾಗಿ ಸಂಗೀತಾ ಹೊರಹೊಮ್ಮಿದ್ದಾಳೆ.

  ತಾಲೂಕಿನ ಹಡಿನಬಾಳ ಗ್ರಾ.ಪಂ. ವ್ಯಾಪ್ತಿಯ ಕಡಗೇರಿ ಲಕ್ಷಣ ನಾಯ್ಕ ಹಾಗೂ ಜಯಾ ನಾಯ್ಕರವರ 3ನೇ ಪುತ್ರಿಯಾದ ಸಂಗೀತಾ, ಚಿನ್ನದ ಪದಕ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಚಿಕ್ಕಂದಿನಿಂದಲೂ ತಂದೆ ಮತ್ತು ಅಜ್ಜನೊಂದಿಗೆ ಭಜನೆ ಹಾಗೂ ಜನಪದ ಗೀತೆಯನ್ನು ಹಾಡುತ್ತಾ ಶಾಲೆಯ ಮೆಟ್ಟಿಲನ್ನು ಏರಿದವಳು. ತನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಶಾಲಾ ಮುಖ್ಯೋಪಾಧ್ಯಾಯರು ಇವಳ ಸಂಗೀತದ ಆಸಕ್ತಿ ಹಾಗೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ತಂದೆಯ ಬಳಿ ಸಂಗೀತವನ್ನು ಕಲಿಸುವಂತೆ ಸಲಹೆ ನೀಡಿದರು. ಆಗ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಲಕ್ಷಣ ನಾಯ್ಕ ತನ್ನ ಮಗಳ ಆಸಕ್ತಿ ಗಮನಿಸಿ ಗುರುಗಳ ಸಲಹೆಗೆ ಒಪ್ಪಿ ಹಡಿನಬಾಳ ಶಿವಾನಂದ ಭಟ್ ಇವರ ರಾಗಶ್ರೀ ಸಂಗೀತ ಶಾಲೆಗೆ ಶಿಕ್ಷಣ ಪಡೆಯಲು ಕಲಿಸಿದರು.

  ಗುರುವಿನಿಂದ ಕಲಿತ ಸಂಗೀತ ಶಿಕ್ಷಣವನ್ನು ಪ್ರತಿನಿತ್ಯ ಪರಿಶ್ರಮದಿಂದ ಅಭ್ಯಾಸ ಮಾಡಿ 7ನೇ ತರಗತಿಯಲ್ಲಿರುವಾಗ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣಳಾದಳು. ಇವರ ಸಾಧನೆಗೆ ಮನೆಯವರು ಇನ್ನಷ್ಟು ಪ್ರೋತ್ಸಾಹ ನೀಡಿದರು.

  ವೇದಿಕೆಯ ಮೇಲೆ ಹಲವಾರು ಪುರಸ್ಕಾರ ಪಡೆಯುತ್ತಾ 10ನೇ ತರಗತಿಯಲ್ಲಿರುವಾಗ ಸೀನಿಯರ್ ಪರೀಕ್ಷೆಯಲ್ಲಿಯೂ ಸಾಧನೆ ಮಾಡಿ ಕಲಿಸಿದ ಗುರುಗಳಿಗೆ, ಮನೆಯವರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡುವಂತೆ ಮಾಡಿದಳು. ಹೈಸ್ಕೂಲ್‌ನಲ್ಲಿ ಇರುವಾಗಲೇ ರಾಜ್ಯ ಮಟ್ಟದಲ್ಲಿ 2 ವರ್ಷ ಭಾಗವಹಿಸಿದರೆ ಕಾಲೇಜಿನಲ್ಲಿರುವಾಗಲೂ ಸಂಗೀತ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದಳು. ಒಂದೆಡೆ ಹಡಿನಬಾಳದ ರಾಗಶ್ರೀ ಸಂಗೀತ ಶಾಲೆಯ ಜೊತೆ ಪ್ರೋತ್ಸಾಹ ನೀಡಿದ್ದು ಹೊನ್ನಾವರದ ಎಸ್‌ಡಿಎಂ ಕಾಲೇಜು ಅಂದರೆ ತಪ್ಪಾಗಲಾರದು. ಬಿಎ ಪದವಿ ಶಿಕ್ಷಣದಲ್ಲಿ ಐಚ್ಚಿಕವಾಗಿ ಸಂಗೀತವನ್ನು ಆಯ್ಕೆ ಮಾಡಿಕೊಂಡು ತಾಲೂಕಿನ ಸಂಗೀತ ವಿಭಾಗದ ಎರಡು ಅಮೂಲ್ಯ ರತ್ನವಾದ ಡಾ.ಅಶೋಕ ಹುಗ್ಗಣ್ಣವರ್, ಪ್ರಸಿದ್ಧ ತಬಲಾ ಮಾಂತ್ರಿಕರಾದ ಗೋಪಾಲಕೃಷ್ಣ ಹೆಗಡೆಯವರಿಂದ ಶಿಕ್ಷಣ ಪಡೆದು, ಕಾಲೇಜಿನ ಹಲವಾರು ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಭಾಗವಹಿಸುವ ಜೊತೆ ಪದವಿ ಕಾಲೇಜು ಮಟ್ಟ, ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆಯ ಪಯಣವನ್ನು ಮುಂದುವರೆಸಿದಳು. ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಷಯದಲ್ಲಿ ಎಂಎಯಲ್ಲಿಯೂ ಸಾಧನೆ ಮಾಡಿದ್ದಾರೆ. ಇದೀಗ ಎಸ್‌ಡಿಎಂ ಪದವಿ ಕಾಲೇಜಿನ ಸಂಗೀತ ವಿಭಾಗದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  300x250 AD

  ಸಾಮಾನ್ಯ ಕುಟುಂಬದಿಂದ ಬಂದರೂ ಅಸಾಧಾರಣಾ ಸಾಧನೆ ಮಾಡುತ್ತಾ, ಕುಟುಂಬದವರ, ಶಿಕ್ಷಕರ ಪ್ರೋತ್ಸಾಹದ ಫಲದಿಂದಲೇ ಶರಾವತಿ ಉತ್ಸವ, ಯುವಜನಮೇಳ, ಕರಾವಳಿ ಉತ್ಸವ, ಮಲೆನಾಡು ಉತ್ಸವದಂತಹ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಮೆ ಇವರದ್ದಾಗಿದೆ. ಇವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಕರಾವಳಿ ಉತ್ಸವ, ಯುವಜನ ಉತ್ಸವ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಶಿಷ್ಯವೇತನ, ಪಂಡಿತ್ ಮುಂಗೇಶನಾಥ್ ಗೋವೆಕರ್ ಶಿಷ್ಯವೇತನ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪ್ರತಿಭೆ ಗುರುತಿಸಿ ಸನ್ಮಾನಿಸಿದ್ದಾರೆ.

  ಕೋಟ್…

  ಸಾಧಿಸುವುದು ಬಹಳ ಇದೆ. ಆದರೆ ಈ ಮಟ್ಟಕ್ಕೆ ಸಾಧಿಸಲು ರಾಗಶ್ರೀ ಸಂಗೀತ ಶಾಲೆ ಹಾಗೂ ಎಸ್‌ಡಿಎಂ ಕಾಲೇಜು, ಧಾರವಾಡ ವಿಶ್ವವಿದ್ಯಾಲಯದ ಗುರುಗಳ ಹಾಗೂ ಮನೆಯವರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಹಲವಾರು ವೇದಿಕೆಗಳು ನನಗೆ ಕಾರ್ಯಕ್ರಮ ನೀಡಲು ಅವಕಾಶ ನೀಡಿದೆ. ಮುಂದೆಯೂ ಎಲ್ಲರ ಪ್ರೋತ್ಸಾಹ ಬಯಸುವೆ.– ಸಂಗೀತಾ ನಾಯ್ಕ, ಚಿನ್ನದ ಸಾಧಕಿ

  Share This
  300x250 AD
  300x250 AD
  300x250 AD
  Leaderboard Ad
  Back to top