ಕುಮಟಾ: ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವವೇ ನಮ್ಮೆಡೆ ತಿರುಗಿ ನೋಡುವ ರೀತಿಯಲ್ಲಿ ಸಮರ್ಥ ಆಡಳಿತ ನಡೆಸಿದ್ದಾರೆ. ಭಾರತ ವಿಶ್ವಗುರುವಾಗುವ ಕನಸು ನನಸಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಸೋಮವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಕುಮಟಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡ ಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು. ಇಡೀ ಜಗತ್ತು ಕೊರೋನಾದಿಂದ ಕಂಗಾಲಾದ ಸಂದರ್ಭದಲ್ಲಿ ಸೂಕ್ತ ಲಸಿಕೆಯನ್ನು ವಿಶ್ವದ ದೊಡ್ಡಣ್ಣ ಅಮೆರಿಕಾ ಮಾತ್ರ ಶೋಧಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತ ಅದನ್ನು ಸಾಧಿಸುವಲ್ಲಿ ಸಫಲವಾಯಿತು. ಎಲ್ಲಾ ವಿಭಾಗಗಳಲ್ಲಿ ನಮ್ಮ ದೇಶ ಬಲಿಷ್ಟವಾಗುತ್ತ ಸಾಗಿದೆ ಎಂದು ತಿಳಿಸಿದರು.
ಬಿಜೆಪಿ ಶಿವಮೊಗ್ಗ ಘಟಕದ ಪ್ರಭಾರಿ ಎನ್.ಎಸ್.ಹೆಗಡೆ ಮಾತನಾಡಿ, 2014ರಿಂದ ಇಲ್ಲಿವರೆಗೆ ಕೇಂದ್ರ ಸರ್ಕಾರ ಉತ್ಯುತ್ತಮವಾಗಿ ಆಡಳಿತ ನೀಡಿದ್ದು, ಗರೀಬ್ ಕಲ್ಯಾಣ ಹಾಗೂ ಸೇವಾ ಸುಷಾಶನ ಯೋಜನೆಗಳು ಸೇರಿದಂತೆ ಎಲ್ಲಾ ಸಾಧನೆಗಳು, ಕಾರ್ಯಚಟುವಟಿಕೆಗಳು ಪ್ರತಿ ಗ್ರಾಮಗಳ ಜನರನ್ನು ತಲುಪಬೇಕು ಎನ್ನುವ ಕಾರಣದಿಂದ ಏಳು ಮೋರ್ಚಾಗಳನ್ನು ಮಾಡಲಾಗಿದೆ. ಈ ಮೂಲಕ ಪ್ರತಿ ಮನೆಗಳಿಗೆ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರಗಳ ಮೂಲಕ ಕರಪತ್ರಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಸರ್ಕಾರದ ಪ್ರತಿಯೊಂದು ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವುದು ಕೂಡ ಇದರ ಉದ್ದೇಶವಾಗಿದೆ ಎಂದರು.
ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ನಂದನ್ ದೈವಜ್ಞ, ವಿಘ್ನೇಶ್ ನಾಯ್ಕ, ಸಂತೋಷ ನಾಯಕ, ಸಿರಿಲ್ ಲೋಪೇಸ್, ರವಿ ಗುನಗಾ, ಪವನ ನಾಯ್ಕ, ಗೋಪಿ ಜಾಲಿ, ಮಾರುತಿ ಅಂಬಿಗ, ವಿವೇಕ ಭಟ್ಟ ಬ್ರಹ್ಮೂರು, ರಾಜೇಶ ಮಡಿವಾಳ ಅವರನ್ನು ಯುವ ಮೋರ್ಚಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲದ ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ ಕುಮಾರ್ ಗಾಂವಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೆರಿ, ಜಿಲ್ಲಾ ಪ್ರಭಾರಿ ಎನ್. ಎಸ್.ಹೆಗಡೆ, ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಎಂ.ಜಿ.ಭಟ್ಟ, ವೈದ್ಯ ಡಾ.ಜಿ.ಜಿ.ಹೆಗಡೆ, ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಭಟ್ಟ ಇದ್ದರು. ಆದಿತ್ಯ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.