ಹಳಿಯಾಳ: ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡುತ್ತಿದ್ದ ಅಂತರ್ರಾಜ್ಯ ಕಳ್ಳರನ್ನು ಇಲ್ಲಿನ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಪಟ್ಟಣದ ಯಲ್ಲಾಪುರ ಓಣಿಯ ಕರಗಣವರ ಹಕ್ಕಲ ನಿವಾಸಿಗಳಾದ ತಬರೇಜ್ ಮೊಹಮ್ಮದ್, ಇಜಾಜ್ ಜಾಫರ್ ಶೇಖ್ ಹಾಗೂ ಮತ್ತೊಬ್ಬ ಅಪ್ರಾಪ್ತ ಬಾಲ ಆರೋಪಿಯನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿದ್ದು, ಅವರಿಂದ ವಿವಿಧೆಡೆ ಕಳವು ಮಾಡಿದ್ದ ಸುಮಾರು 14 ಮೊಬೈಲ್ ಹಾಗೂ 1 ಲ್ಯಾಪ್ಟಾಪ್ ಅನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಮೇ 25ರಂದು ಪಟ್ಟಣದ ಬಸ್ ಸ್ಟಾಂಡ್ ರಸ್ತೆಯಲ್ಲಿನ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆಯಲ್ಲಿನ ಲಕ್ಷ್ಮಿ ಟೇಲ್ ಆಂಡ್ ಜನರಲ್ ಸ್ಟೊರ್ಸ್ ನ ಹಿಂಭಾಗದ ಕಿಟಿಕಿಯಿಂದ ಒಳಹೊಕ್ಕು ವಿವೋ, ರೆಡ್ ಮಿ, ರಿಯಲ್ ಮಿ ಹಾಗೂ ಸೆಲ್ಕೋರ್ ಕಂಪನಿಯ ಒಟ್ಟು 8.20 ಲಕ್ಷ ಅಂದಾಜು ಮೊತ್ತದ 32 ಮೊಬೈಲ್, ಒಂದು ಲ್ಯಾಪ್ಟಾಪ್ ಹಾಗೂ ಅಂಗಡಿಯ ಕೌಂಟರ್ನಲ್ಲಿಟ್ಟ 60 ಸಾವಿರ ನಗದನ್ನು ಕಳವು ಮಾಡಿದ್ದ ಬಗ್ಗೆ ಅಂಗಡಿಯ ಮಾಲೀಕ ಅನಿಲ ದೇವರಮನಿ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿವೈಎಸ್ಪಿ ಕೆ.ಎಲ್.ಗಣೇಶ್, ಸಿಪಿಐ ರಂಗನಾಥ ನೀಲಮ್ಮನವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಶಿವಾನಂದ ನಾದಲಗಿ, ಉಮಾ ಬಸರಕೋಡ, ಪ್ರೊಬೆಷನರಿ ಪಿಎಸ್ಐಗಳಾದ ಜಗದೀಶ, ಸುನೀಲಕುಮಾರ ಅವರ ತಂಡವು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು. ಆರೋಪಿ ತಬರೇಜ್ ಮೊಹಮ್ಮದ್ ಜೂನ್ 8ರಂದು ಹುಬ್ಬಳ್ಳಿ ಬಸ್ ನಿಲ್ದಾಣದ ಬಳಿ ಸಿಕ್ಕರೆ, ಇನ್ನೋರ್ವ ಇಜಾಜ್ ಜಾಫರ್ ಹಾಗೂ ಅಪ್ರಾಪ್ತ ಬಾಲ ಆರೋಪಿಯನ್ನು 13ರಂದು ಧಾರವಾಡದ ಹಳೆ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ,
ಈ ಕಾರ್ಯಾಚರಣೆಯಲ್ಲಿ ಎಎಸ್ಐ ಪಿ.ಎಮ್.ಸೊಲ್ಲಾಪುರಿ, ಸಿಬ್ಬಂದಿ ಎಮ್.ಎಮ್.ಮುಲ್ಲಾ, ದುರ್ಗಪ್ಪ ಮೇತ್ರಿ, ಇಸ್ಮಾಯಿಲ್ ಕೋಣನಕೇರಿ, ಜಗದೀಶ ಕುಂಬಾರ, ನಿಂಗಪ್ಪ ಬಳ್ಳಾರಿ, ಬಸವರಾಜ ಚನ್ನಪ್ಪಗೊಳ, ಶ್ರೀಶೈಲ್ ಮಂಗಾನವರ, ರಾಚಪ್ಪ ದನಗಾರ, ಕೋಟೇಶ್ವರ ಎನ್.ಎ. ಹಾಗೂ ಗುರುರಾಜ ಬಿಷ್ಠಪ್ಪನವರ ಭಾಗವಹಿಸಿದ್ದರು. ಈ ತಂಡದ ಕಾರ್ಯಾಚರಣೆಗೆ ಎಸ್ಪಿ ಡಾ.ಸುಮನ ಪೆನ್ನೇಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಐಷಾರಾಮಿ ಬದುಕಿಗಾಗಿ ಕಳ್ಳತನ: ಬಂಧಿತರಾದ ಮೂವರೂ ನಿರುದ್ಯೋಗಿಗಳಾಗಿದ್ದು, ಐಷಾರಾಮಿ ಬದುಕನ್ನು ಬಯಸಿ ಸುಲಭವಾಗಿ ಕೈಗೆ ಹಣ ಬರುವಂತಹ ಕಳ್ಳತನದ ಅಡ್ಡ ಕಸಬನ್ನು ಆರಿಸಿಕೊಂಡಿದ್ದರು ಎನ್ನುವುದು ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ. ಅದಕ್ಕಾಗಿ ದೊಡ್ಡ ದೊಡ್ಡ ಮೊಬೈಲ್ ಶೋರೂಮ್ಗಳನ್ನೇ ಆಯ್ಕೆ ಮಾಡಿ, ಬೆಳಗ್ಗೆ ಸ್ಕೆಚ್ ಹಾಕಿ ರಾತ್ರಿ ಲಗ್ಗೆಯಿಟ್ಟು ಕಳವು ಮಾಡುತ್ತಿದ್ದರು. ಕಳವು ಮಾಡಿದ ಮೊಬೈಲ್ಗಳನ್ನು ಮಾರಾಟ ಮಾಡಿ ಗೋವಾಕ್ಕೆ ತೆರಳಿ ಪಾರ್ಟಿ, ಮೋಜು- ಮಸ್ತಿ ಮಾಡಿ ಜೀವನ ಕಳೆಯುತ್ತಿದ್ದರೆನ್ನಲಾಗಿದೆ. ಮತ್ತೆ ಹಣದ ಅವಶ್ಯಕತೆ ಬಿದ್ದಾಗ ಮತ್ತೆ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದರೆನ್ನಲಾಗಿದೆ.