ಕುಮಟಾ: ಇಲ್ಲಿನ ಕೆನರಾ ಕಾಲೇಜು ಸೊಸೈಟಿ ಮತ್ತು ಸಂಸ್ಥೆಯ ಅಲ್ಮಿನಿ ಟ್ರಸ್ಟ್ ಗೆ ದಾನಿಗಳು ನೀಡಿದ ಲಕ್ಷಾಂತರ ರೂ. ಹಣವನ್ನು ದುರ್ಬಳಕೆ ಮಾಡಲಾಗಿದೆ. ಕೆನರಾ ಕಾಲೇಜ್ ಸೊಸೈಟಿಯ ಕಾರ್ಯದರ್ಶಿ ಪಟ್ಟಣದ ರಥಬೀದಿಯ ಕೆನರಾ ಬ್ಯಾಂಕ್ ಸಮೀಪದ ನಿವಾಸಿ ಸುಧಾಕರ ನಾಯಕ ಅವರ ವಿರುದ್ಧ 75 ಲಕ್ಷ ರೂ. ಅವ್ಯವಹಾರ ನಡೆಸಿದ ಬಗ್ಗೆ ಸಂಸ್ಥೆಯ ಟ್ರಸ್ಟಿ ಮಹಾರಾಷ್ಟ್ರದ ನಿವಾಸಿ ರಾಮ ಶಾನಭಾಗ ಎಂಬುವವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು, ವಾಣಿಜ್ಯ ಕಾಲೇಜು, ಕಮಲಾ ಬಾಳಿಗಾ ಶಿಕ್ಷಣ ಮಹಾ ವಿದ್ಯಾಲಯ ಮತ್ತು ಅಲ್ಮಿನಿ ಟ್ರಸ್ಟ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಅದಕ್ಕೆ ತನ್ನ ಮತ್ತು ಸಂಸ್ಥೆಯ ಅಡಿಯಲ್ಲಿರುವ ಕಾಲೇಜು ಪ್ರಾಚಾರ್ಯ ಪಿ.ಕೆ.ಭಟ್, ಪ್ರೀತಿ ಭಂಡಾಕರ್, ಶ್ರೀನಿವಾಸ ಶೇಣ್ವಿ ಹಾಗೂ ಇನ್ನಿತರರ ಹೆಸರುಗಳಲ್ಲಿ ದಾಖಲೆಗಳನ್ನು ನೀಡಿ, ದಾನಿಗಳಿಂದ ಹಣ ಪಡೆದಿದ್ದಾರೆ. ಸಂಸ್ಥೆಯ ಹಣಕಾಸು ವ್ಯವಹಾರ ಆಡಿಟ್ ಮಾಡಿಸದೆ ಖರ್ಚು ಹಾಕಿದ ಬಗ್ಗೆ ಸಮರ್ಪಕ ದಾಖಲೆಗಳನ್ನು ನಿರ್ವಹಿಸದೇ 75 ಲಕ್ಷಕ್ಕೂ ಅಧಿಕ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸುಧಾಕರ ನಾಯಕ ಅವರ ಹೆಸರು ಅಬ್ದುಲ್ ಗಫೂರ್ ರೆಹಮಾನ್ ಎಂದು ಅವರು ಓದಿದ ಗಿಬ್ ಹೈಸ್ಕೂಲಿನ ದಾಖಲೆಯಲ್ಲಿದ್ದು, ಬಳಿಕ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಅದೇ ಹೆಸರಿನಲ್ಲಿ ಪಾನ್‌ಕಾರ್ಡ್ ಮಾಡಿಸಿಕೊಂಡಿದ್ದಾರೆ. ತನ್ನದೆ ನಕಲಿ ಫಾರ್ಮ್ ಗಳಿಗೆ ಸಂಸ್ಥೆಯಡಿಯಲ್ಲಿರುವ ವಿವಿಧ ಕಾಲೇಜು ಕಟ್ಟಡಗಳ ಕಾಮಗಾರಿ ಕೈಗೊಂಡು ಅದರಲ್ಲೂ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಂಸ್ಥೆಗೆ ದಾನಿಗಳಿಂದ ಪಡೆದ ಲಕ್ಷಾಂತರ ರೂ. ಹಣದಲ್ಲೂ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಕೊಂಡ ಪಿಎಸ್‌ಐ ಪದ್ಮಾ ದೇವಳಿ ಅವರು ತನಿಖೆ ಕೈಗೊಂಡಿದ್ದಾರೆ.