ಕುಮಟಾ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವಲ್ಲಿ ಧರ್ಮಸ್ಥಳ ಸಂಘದ ಪಾತ್ರ ಹಿರಿದಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಪೈರುಗದ್ದೆ ಶಾಂತಿಕಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತರಕನ್ನಡ / ಕುಮಟಾ ಯೋಜನಾ ಕಚೇರಿಗಳ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮಸ್ಥಳ ಸಂಘ ಪ್ರಾರಂಭವಾದ ಮೇಲೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿದ್ದು, ಎಲ್ಲಾ ಕ್ಷೇತ್ರಕ್ಕೆ ಇದರ ಕೊಡುಗೆ ಮಹತ್ತರವಾದುದು. ಕಷ್ಟದಲ್ಲಿರುವವರಿಗೆ ಹೆಗಲಾಗಿ ನಿಂತು ಸಾವಿರಾರು ಜನರಿಗೆ ದಾರಿದೀಪವಾಗಿದೆ. ಸ್ಪಂದನೀಯ ಗುಣ, ನಿಸ್ವಾರ್ಥ ಸೇವೆಯಿಂದಲೆ ಎಲ್ಲರ ವಿಶ್ವಾಸ ಗಳಿಸಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಎಲ್.ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್, ಅನುಷಾ, ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಶೇಟ್, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಮೋಹಿನಿ ಗೌಡ, ಜಯಾ ಶೇಟ್, ಗೌರಿ ವೈದ್ಯ, ಮಹೇಶ ನಾಯಕ ವನ್ನಳ್ಳಿ ಮುಂತಾದವರು ಇದ್ದರು. ಯೋಜನಾಧಿಕಾರಿ ನಾಗರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.