ಹೊನ್ನಾವರ: ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರರಿಗೆ ಹಾಗೂ ಸಾರಿಗೆ ಇಲಾಖೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಜನಕಡ್ಕಲ್ ಕೋಟೆಬೈಲ್ ಮಾಳ್ಕೋಡ, ಇಡಗುಂಜಿ ಭಾಗದವರು ಬಸ್ ಗಳನ್ನೇ ಅವಲಂಬಿಸಿಕೊಂಡಿದ್ದು ಈ ಭಾಗಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಕಾಸರಕೋಡು ಒಳ ರಸ್ತೆಯಲ್ಲಿ ಸಂಚರಿಸುತ್ತಿರುವಂತಹ ಬಸ್ ಪ್ರವೇಶಿಸದೇ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗುವುದರಿಂದ ಈ ಭಾಗದ ಕಳಸನಮೋಟೆ ಕೋಟೆಹಿತ್ಲು, ಮಲಮಸಿಕೇರಿ, ಮಲಬಾರ್ ಕೇರಿಯವರು 2ರಿಂದ 3 ಕಿ.ಮೀ. ನಡೆದುಕೊಂಡು ಸಾಗಬೇಕಿದೆ. ಈ ಭಾಗದಲ್ಲಿ ಮೊದಲಿನ ರೀತಿಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತಹಶೀಲ್ದಾರಿಗೆ ಮನವಿ ಸಲ್ಲಿಸಿದರು.
ಸಮಸ್ಯೆ ಬಗೆಹರಿಯದೇ ಹೋದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೊತೆ ಕರವೇ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯ್ಕ, ಸಾಲ್ಕೋಡ್ ಗ್ರಾ.ಪಂ. ಉಪಾಧ್ಯಕ್ಷ ಸಚಿನ್ ನಾಯ್ಕ, ಕಾರ್ಯದರ್ಶಿ ಶಿವಪ್ರಸಾದ್ ಗೌಡ, ತರುಣ್ ನಾಯ್ಕ್ ಮತ್ತು ಇತರ ಕರವೇ ಸದಸ್ಯರು ಹಾಜರಿದ್ದರು.