ಜೊಯಿಡಾ: ತಾಲೂಕಿಗೆ ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ರಕ್ಷಿತ್ರಾ ಪೆರೆರಾ ಅವರನ್ನು ಸೂಪಾ ಗ್ರೇಟ್ ವಾರಿಯರ್ ನಿವೃತ್ತ ಸೈನಿಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಪಾ ಗ್ರೇಟ್ ವಾರಿಯರ್ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ, ಹಳ್ಳಿಗಾಡಿನ ಮಕ್ಕಳಾದರೂ ಕೂಡಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯುವುದರ ಮೂಲಕ ರಕ್ಷಿತ್ರಾ ಪೆರೆರಾ ತಾಲೂಕಿನ ಮಕ್ಕಳಿಗೆ ಮಾದರಿಯಾಗಿದ್ದಾಳೆ. ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಇದ್ದರೆ ಸಾಧನೆ ಮಾಡಬಹುದು ಎಂದರು.
ಇನ್ನೊಬ್ಬ ನಿವೃತ್ತ ಸೈನಿಕ ನರೇಂದ್ರ ನಾಯ್ಕ ಮಾತನಾಡಿ, ಕಳೆದ ಎರಡು ವರ್ಷದಿಂದ ಗುಂದ ಪ್ರೌಢಶಾಲಾ ಮಕ್ಕಳೇ ತಾಲೂಕಿಗೆ ಪ್ರಥಮ ಬಂದಿದ್ದಾರೆ. ಮುಂದಿನ ಬಾರಿಯು ಪ್ರಥಮ ಬರುವ ಎಲ್ಲಾ ಪ್ರಯತ್ನ ಮಾಡಿ. ನಮ್ಮ ತಾಲೂಕು ಹಿಂದುಳಿದ ತಾಲೂಕು ಎನ್ನುವುದು ಸುಳ್ಳು, ಶೈಕ್ಷಣಿಕವಾಗಿ ನಮ್ಮ ತಾಲೂಕು ಸದಾ ಮುಂದೆ ಇದೆ ಎಂದರು.
ಈ ಸಂದರ್ಭದಲ್ಲಿ ನಂದಿಗದ್ದ ಪ್ರೌಢಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾನಂದ ಉಪಾಧ್ಯ, ಗ್ರಾ.ಪಂ ಸದಸ್ಯೆ ದಾಕ್ಷಾಯಿಣಿ ದಾನಶೂರ, ನಿವೃತ್ತ ಸೈನಿಕ ಪ್ರಕಾಶ ದೇಸಾಯಿ, ರತ್ನಾಕರ ಗಾವಡಾ, ಶಿವಕುಮಾರ ನಾಯ್ಡು, ಗಜಾನನ ನಾಯ್ಕ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಜೋಸೆಫ್ ಗೊನ್ಸಾಲ್ವಿಸ್ ಹಾಗೂ ಶಿಕ್ಷಕರು ಇದ್ದರು.