ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತದ 11 ನೇ ವರ್ಷದ ಕದಂಬ ಸಸ್ಯಸಂತೆಯನ್ನು ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ ಹೆಗಡೆ ಮುಳಖಂಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕದಂಬ ಮಾರ್ಕೆಟಿಂಗ್ ಸಹಕಾರಿ ವ್ಯವಸ್ಥೆಯಲ್ಲಿ ಈ ಥರದ ವೈವಿದ್ಯಮಯ ಚಟುವಟಿಕೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವೇಶ್ವರ ಭಟ್ಟ ಕೋಟೆಮನೆ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಆವರಣದಲ್ಲಿ ಸಸ್ಯಸಂತೆ ಪ್ರಾರಂಭವಾಗಿದ್ದು ಜಾಯಿಕಾಯಿ, ಲವಂಗ, ಗೇರು, ಮಾವು, ನೆಲ್ಲಿ, ಕಾಳುಮೆಣಸು, ಕೊಕ್ಕೋ,ಕಾಫಿ, ಅಪ್ಪೆ, ಮಾವು, ಹಲಸು,ವಿವಿಧ ಜಾತಿಯ ಹಣ್ಣಿನ ,ಹೂವಿನ ಮತ್ತು ಅಲಂಕಾರಿಕ ಗಿಡಗಳು ಲಭ್ಯವಿರುತ್ತವೆ. ಇದರೊಂದಿಗೆ ನಾಗಸಂಪಿಗೆ, ಸಿಮಾರುಬಾ, ಹೊಂಗೆ ಮತ್ತಿತರ ಜೈವಿಕ ಇಂಧನ ಗಿಡಗಳನ್ನೂ ವಿತರಿಸಲಾಗುವದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾದರಿ ರೈತರಾದ ಭಟ್ಕಳದ ಕೇದಾರ ಕೊಲ್ಲೆಯವರು ರೈತರಿಗೆ ವಿವಿಧ ಜಾತಿಯ ಉತ್ತಮ ಗುಣಮಟ್ಟದ ಗಿಡಗಳನ್ನು ಒದಗಿಸುವ ಉದ್ದೇಶದಿಂದ ಈ ಸಂತೆಯನ್ನು ಆಯೋಜಿಸಲಾಗಿದ್ದು ಇದೊಂದು ಉತ್ತಮ ಕಾರ್ಯ. ಈ ಥರದ ಕಾರ್ಯಕ್ರಮವನ್ನು ಕರಾವಳಿ ಭಾಗದಲ್ಲೂ ಆಯೋಜಿಸುವ ಅಗತ್ಯವಿದೆಯೆಂದರು.
ಅಧ್ಯಕ್ಷತೆ ವಹಿಸಿದ್ದ ಶಂಭುಲಿಂಗ ಹೆಗಡೆಯವರು ಯಾವುದೇ ರೈತರು ತಾವು ಬೆಳೆಸಿದ, ಕಸಿ ಮಾಡಿದ ಗಿಡಗಳನ್ನು ಮಾರಾಟ ಮಾಡಲು ಸಸ್ಯಸಂತೆ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆಯಬಹುದು. ಸಂಸ್ಥೆಯು ಗುಣಮಟ್ಟದ ಗಿಡಗಳನ್ನು ಒದಗಿಸಲು ಶ್ರಮಿಸುತ್ತಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಕದಂಬ ಮಾರ್ಕೆಟಿಂಗ್ ಎ.ಪಿ.ಎಮ್.ಸಿ ಯಾರ್ಡ ಶಿರಸಿ, ದೂರವಾಣಿ ಸಂಖ್ಯೆ- 8296497574 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.