ಜೊಯಿಡಾ: ತಾಲೂಕಿನ ತಿನೈಘಾಟ ಅರಣ್ಯ ಇಲಾಖೆ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ಚಿಣ್ಣರವನ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಇಕೋ ಪಾರ್ಕ್, ಕಾಡು, ಮರಮುಟ್ಟು ಸಂಗ್ರಹಾಲಯ, ಸಸ್ಯ ಪಾಲನಾ ಕ್ಷೇತ್ರ, ಪ್ರಕೃತಿ ಶಿಬಿರ ಸೇರಿದಂತೆ ಇತರೆ ಪರಿಸರಿಕ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಿನೈಘಾಟ ವಲಯ ಅರಣ್ಯಾಧಿಕಾರಿ ವಿನಯ ಭಟ್ಟ, ಮಕ್ಕಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮ ಉತ್ತಮವಾದದ್ದು. ವನದರ್ಶನದಿಂದ ಮಕ್ಕಳಿಗೆ ಕಾಡಿನ ಬಗ್ಗೆ ಅರಿವು ಮೂಡುತ್ತದೆ. ಅಲ್ಲದೇ ಪ್ರಕೃತಿ ಬಗ್ಗೆ ಹೆಚ್ಚಿನ ಆಸಕ್ತಿ ಮಕ್ಕಳಲ್ಲಿ ಬೆಳೆಯುತ್ತದೆ. ನಮ್ಮ ತಾಲೂಕು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಕಾಡು ಬೆಳೆಸುವುದರಿಂದ ಮಾನವ ಬದುಕುತ್ತಾನೆ. ಕಾಡಿನ ನಾಶದಿಂದ ಮಾನವ ಪೀಳಿಗೆ ನಾಶವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಿನೈಘಾಟ ಅರಣ್ಯ ಇಲಾಖೆ ಸಿಬ್ಬಂದಿ, ತಿನೈಘಾಟ ಪ್ರೌಢಶಾಲಾ ಶಿಕ್ಷಕರು ಮತ್ತು ಊರನಾಗರಿಕರು ಇದ್ದರು.