ದಾಂಡೇಲಿ: ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜಿನ ಸಾಂಸ್ಕೃತಿಕ ವಿಭಾಗದಿಂದ ಹಮ್ಮಿಕೊಂಡಿರುವ ಫನ್ವೀಕ್ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಆಟ- ಪಾಠದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯವಶ್ಯ. ಮನಸ್ಸಿನ ಒತ್ತಡ ಕಡಿಮೆ ಮಾಡುವಲ್ಲಿ ಮತ್ತು ಪರಸ್ಪರ ಸೌಹಾರ್ದತೆಯನ್ನು ಸಾರುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದೆ. ತಮ್ಮಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಬಹಳ ಸುಲಭ ಹಾಗೂ ಸರಳವಾದ ವೇದಿಕೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು. ಮನಸ್ಸನ್ನು ಕ್ರಿಯಾಶೀಲವನ್ನಾಗಿಸುವುರ ಜೊತೆಗೆ ಉಲ್ಲಾಸಿತವನ್ನಾಗಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಪ ಪ್ರಾಚಾರ್ಯರಾದ ನಯನಾ ರೇವಣಕರ, ಪ್ರಾಧ್ಯಪಕರುಗಳಾದ ಡಾ.ಪಿ.ಎ.ಹೊಸಮನಿ, ಪ್ರೊ.ವಿನಯ್.ಎಸ್, ಪ್ರೊ.ಎಸ್.ಕೆ.ಬಾಗೇವಾಡಿ ಭಾಗವಹಿಸಿ, ಒಂದು ವಾರಗಳ ನಡೆಯಲಿರುವ ಫನ್ವೀಕ್ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ನವಚೈತನ್ಯವನ್ನು ತಂದುಕೊಡುವಂತಾಗಲೆಂದು ಶುಭ ಹಾರೈಸಿದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ಗುಂಡೂರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಪ್ರಾಧ್ಯಾಪಕ ಡಾ.ಎಸ್.ಎಸ್ ದೊಡಮನಿಯವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ಸ್ಲೋಸೈಕಲ್ ರೇಸ್ ಎಲ್ಲರ ಗಮನ ಸೆಳೆಯಿತು. ಇನ್ನು ವಾರಪೂರ್ತಿ ನಡೆಯುವ ಈ ಉತ್ಸವದಲ್ಲಿ ಹಾಸ್ಯಲಾಸ್ಯ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ.