ಕಾರವಾರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ದಿವೇಕರ ಪದವಿ ಮಹಾವಿದ್ಯಾಲಯ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಅಜಾದ್ ಯುತ್ ಕ್ಲಬ್, ರೆಡ್ ರಿಬ್ಬನ್ ಕ್ಲಬ್, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು.
ನಗರದ ದಿವೇಕರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದಕ್ಕೆ ಭಯಪಡುವ ಅಗತ್ಯವಿಲ್ಲ. ರಕ್ತದಾನ ಮಾಡಿದ ನಂತರ ಅದು ಕೇವಲ 15 ನಿಮಿಷದಲ್ಲಿ ಪುನಃ ಉತ್ಪತ್ತಿಯಾಗುತ್ತದೆ. ರಕ್ತದಾನವನ್ನು ಪರಿಸ್ಥಿತಿಗೆ ತಕ್ಕಂತೆ ಹಾಗೂ ಪ್ರತಿ 3 ಅಥವಾ 4 ತಿಂಗಳಿಗೊಮ್ಮೆಯಾದರೂ ವಿದ್ಯಾರ್ಥಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡಿದಾಗ ನಮಗೆ ಸಿಗುವ ಸಂತೋಷ ಅದು ಯಾವಾಗಲೂ ಸಿಗುವಂಥದ್ದಲ್ಲ. ಏಕೆಂದರೆ ರಕ್ತದಾನದಿಂದ ಒಂದು ಜೀವ ಉಳಿಸಿದ ಸಂತೋಷ ನಮ್ಮದಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ದಾನಗಳಲ್ಲಿ ರಕ್ತದಾನವೇ ಶ್ರೇಷ್ಠದಾನವಾಗಿದೆ ಎಂದು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿ, ವರ್ಷದಲ್ಲಿ ಒಂದು ಬಾರಿಯಾದರೂ ರಕ್ತದಾನ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಸಲುವಾಗಿ ಡಾ.ಕೇಶವ ಕೆ.ಜಿ ಅವರಿಗೆ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿನಿ ಅಮಿಷಾ ಮಾಜಾಳಿಕರ ಪ್ರಾರ್ಥಿಸಿದರು. ಉಪನ್ಯಾಸಕ ರಾಜೇಶ ನಿರೂಪಿಸಿದರು. ಶುಭಂ ತಳೇಕರ ಸ್ವಾಗತಿಸಿದರು. ಡಾ.ಹರೀಶ ಕಾಮತ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಛೇರಿಯ ಸಿಬ್ಬಂದಿ ಹಾಜರಿದ್ದರು.