ಮುಂಡಗೋಡ: ಪಟ್ಟಣದ ಎಪಿಎಂಸಿಗೆ ಪ್ರವೇಶ ಮಾಡುವ ದ್ವಾರದಲ್ಲಿ ಚರಂಡಿಗೆ ಹಾಕಿದ್ದ ಮುಚ್ಚಿಗೆ ಒಡೆದಿದ್ದು, ಎಪಿಎಂಸಿಗೆ ಓಡಾಡುವ ವಾಹನ ಸವಾರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ರೈತರು ಪಟ್ಟಣದ ಬೀಜ, ಗೊಬ್ಬರ ಇನ್ನಿತರ ಕೃಷಿ ಉಪಕರಣಗಳನ್ನ ಖರೀದಿ ಮಾಡಲು ಎಪಿಎಂಸಿಗೆ ಆಗಮಿಸುತ್ತಾರೆ. ಆದರೆ ಎಪಿಎಂಸಿ ಪ್ರವೇಶ ದ್ವಾರದಲ್ಲಿಯೇ ಗುಂಡಿ ಬಿದ್ದಿದ್ದು ಅಡ್ಡಲಾಗಿ ಮರದ ತುಂಡನ್ನ ಇಡಲಾಗಿದೆ. ಒಮ್ಮೆಲೆ ಬರುವ ಬೈಕ್ ಸವಾರರು ಗುಂಡಿಯನ್ನ ತಪ್ಪಿಸಲು ಹೋಗಿ ಬೀಳುವಂತಾಗಿದ್ದು, ಓರ್ವ ಬೈಕ್ ಸವಾರ ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡ ಘಟನೆ ಸಹ ನಡೆದಿದೆ.
ಎಪಿಎಂಸಿ ಎದುರೇ ಶಿರಸಿ- ಹುಬ್ಬಳ್ಳಿ ಮಾರ್ಗವಿದ್ದು ವೇಗವಾಗಿ ಬಸ್ಸುಗಳು ಸಂಚರಿಸುತ್ತಿರುತ್ತದೆ. ಒಮ್ಮೆಲೆ ಬರುವ ಬೈಕ್ ಸವಾರರು ಗುಂಡಿ ತಪ್ಪಿಸಲು ಹೋದರೆ ಬಸ್ಸುಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇದ್ದು, ಎಪಿಎಂಸಿ ಅಧಿಕಾರಿಗಳು ಕೂಡಲೇ ಇದನ್ನ ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.