ಕುಮಟಾ: ಕೃಷಿ ಪರಿಕರಗಳನ್ನು ಸೂಕ್ತ ಕೃಷಿಕರಿಗೆ ನೀಡುವ ಹಾಗೂ ರೈತರಿಗೆ ಕೃಷಿ ಸಂಬಂಧಿತ ಮಾಹಿತಿಗಳನ್ನು ಸರಿಯಾಗಿ ಸರಿಯಾದ ಸಮಯಕ್ಕೆ ತಿಳಿಯಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ್ ಪಟಗಾರ್ ನೇತೃತ್ವದಲ್ಲಿ ಮಂಗಳವಾರ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ವಿಶೇಷವಾಗಿ ಕೃಷಿಯನ್ನೇ ನಂಬಿ ಬದುಕನ್ನು ಕಟ್ಟಿಕೊಂಡಿರುವವರು ಹೆಚ್ಚಿನ ರೈತರ ಇದ್ದಾರೆ. ಅದರಲ್ಲೂ ವಿಶೇಷವಾಗಿ ಸಣ್ಣ ಪ್ರಮಾಣದ ಹಿಡುವಳಿದಾರರು ಕೃಷಿ ಚಟುವಟಿಕೆಯಿಂದ ಜೀವನ ಸಾಗಿಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ರೈತರಿಗೆ ಕೃಷಿಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೃಷಿ ಸಂಬಂಧಿತ ಪರಿಕರಗಳು ಬಿತ್ತನೆ ಬೀಜಗಳು ಕೃಷಿ ಸಾಲಗಳು ಸಿಗುತ್ತಿಲ್ಲ ಎಂದು ಕಿಡಿಕಾರಿದರು.
ಅಲ್ಲದೇ ಮೂಲ ಕೃಷಿಯನ್ನೇ ದಿನನಿತ್ಯ ಬದುಕನ್ನಾಗಿ ದುಡಿಯುವವರಿಗೆ ಮಾಹಿತಿ ಹಾಗೂ ಸರ್ಕಾರದ ಸೌಲಭ್ಯಗಳು ವಂಚಿತವಾಗುತ್ತಿರುವುದು ತಿಳಿದು ಬಂದಿದೆ. ರೈತರಿಗೆ, ಕೃಷಿಕರಿಗೆ ಕೆಲವು ಭಾಗದಲ್ಲಿ ಸರ್ಕಾರದಿಂದ ತಾಲೂಕು ಆಡಳಿತದಿಂದ ಸರಿಯಾದ ಸಮಯಕ್ಕೆ ಪ್ರೋತ್ಸಾಹ ಸಿಗದ ಕಾರಣ ಹಲವರು ಕೃಷಿಯನ್ನು ಬಿಟ್ಟಿರುವುದು ಬೆಳಕಿಗೆ ಬಂದಿದೆ. ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಷ್ಟಕರವಾಗಿದೆ. ಕೃಷಿ ಇಲಾಖೆಯ ಸೂಕ್ತ ಪರಿಹಾರ ಸಿಗದೇ ಕೃಷಿಕರು ತೊಂದರೆಗೀಡಾಗುತ್ತಿದ್ದಾರೆ.
ಸದ್ಯ ಮಳೆಗಾಲ ಆರಂಭವಾಗಿರುವುರಿಂದ ಕೃಷಿಗೆ ಸಂಬಂಧಿತ ಪರಿಕರಗಳಾದ, ಪ್ಲಾಸ್ಟಿಕ್ ವಿತರಣೆಯಲ್ಲಿ ಸರಿಯಾದ ಸಮರ್ಪಕವಾದ ಭತ್ತ ಬೆಳೆಯುವ ರೈತರಿಗೆ ಸಿಗದೆ ಕಳೆದ ಬಾರಿ ಸಾಕಷ್ಟು ಬೆಳೆ ಹಾನಿಯಾಗಿದೆ. ಇದಲ್ಲದೇ ರೈತರಿಗೆ ಬೆಳೆ ಸಾಲ ಕೂಡ ನೀಡುವಲ್ಲಿ ಕೃಷಿ ಇಲಾಖೆಯಿಂದ ವಿಳಂಬವಾಗಿದೆ. ಕೃಷಿ ಸಂಬಂಧಿತ ಬಿತ್ತನೆ ಬೀಜ ಗೊಬ್ಬರ ಸರಿಯಾದ ರೀತಿಯಲ್ಲಿ ಸೂಕ್ತ ರೈತರಿಗೆ ಸಿಕ್ಕಾಗ ಮಾತ್ರ ಕೃಷಿ ಚಟುವಟಿಕೆಗಳಿಗೆ ಬೆಂಬಲಿಸುವಂತಾಗಲಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕೃಷಿಕರ ನೆರವಿಗೆ ನಿಲ್ಲಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಗ್ರಹಿಸಿದರು.