ದಾಂಡೇಲಿ: ಒಂದು ಸಮಯದಲ್ಲಿ ಪುಂಡ ಪೋಕರಿಗಳ ಅಡ್ಡೆಯಾಗಿದ್ದ ದಂಡಕಾರಣ್ಯ ಕಾಡನ್ನು ಅರಣ್ಯ ಇಲಾಖೆ ವಿಶೇಷ ಮುತುವರ್ಜಿ ವಹಿಸಿ, ಬೆಳೆದು ನಿಂತಿರುವ ಬಹುಕಾಲದ ಮರ ಗಿಡಗಳಿಗೆ ಎಲ್ಲಿಯೂ ಹಾನಿಯಾಗದಂತೆ, ಅವುಗಳ ರಕ್ಷಣೆಯ ಜೊತೆಗೆ ದಟ್ಟ ಕಾಡಿನ ಸೊಬಗನ್ನು ಅನುಭವಿಸುವಂತಾಗಬೇಕೆಂದು ಬಯಸಿ ನಿರ್ಮಿಸಲಾದ ದೇಶದ ಮೊದಲ ಕಾರ್ಟೂನ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಾರ್ಕ್ ದಂಡಕಾರಣ್ಯ ಇಕೋ ಪಾರ್ಕ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
2017ರಿಂದ ಆರಂಭಗೊಂಡ ಈ ಪಾರ್ಕ್ ಸುಮಾರು 5 ಎಕರೆ ವಿಶಾಲವಾದ ಹಾಗೂ ಮರಗಿಡಗಳನ್ನೊಳಗೊಂಡ ಜಾಗದಲ್ಲಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ಈ ಪಾರ್ಕಿನಲ್ಲಿ ವಿವಿಧ ರೀತಿಯ ಕಾರ್ಟೂನ್ ಆಕೃತಿಗಳು ಎಲ್ಲರ ಗಮನ ಸೆಳೆಯುತ್ತಿವೆ. ವಿಶ್ರಾಂತಿ ಕಟ್ಟೆಗಳು, ತೂಗೂಯ್ಯಾಲೆಗಳು, ಜಾರು ಬಂಡಿ, ಬಯಲು ವೇದಿಕೆ, ವಾಕಿಂಗ್ ಪಾತ್, ಅಂದ ಚೆಂದದ ಹೂವಿನ ಗಿಡಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಕ್ಕಳಿಗೆ ಹೇಳಿ ಮಾಡಿಸಿದಂತಿರುವ ದಂಡಕಾರಣ್ಯ ಇಕೋ ಪಾರ್ಕಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಲ್ಲಿಯ ಪ್ರಕೃತಿ ಸೌಂದರ‍್ಯವನ್ನು ಮತ್ತು ಪಾರ್ಕಿನ ವಿಶಿಷ್ಟತೆಯ ಸವಿಯನ್ನು ಅನುಭವಿಸಿ ಸಂತೃಪ್ತಿಯಿಂದ ಮರಳುತ್ತಿದ್ದಾರೆ.
ಕೋಟ್…
ವಿಶಿಷ್ಟ ಕಲ್ಪನೆಯೊಂದಿಗೆ ಈ ಪಾರ್ಕಿನ ನಿರ್ಮಾಣವಾಗಿದೆ. ಪ್ರಕೃತಿ ಸೌಂರ‍್ಯದ ಸವಿಯನ್ನು ಅನುಭವಿಸಲು ಇಲ್ಲಿಗೆ ಬರಲೆಬೇಕು– ಚೈತ್ರೇಶ್, ಬೆಳ್ತಂಗಡಿ
ಮಕ್ಕಳಿಗೆ ಹೇಳಿ ಮಾಡಿಸಿದ ಪಾರ್ಕ್. ಮರ ಗಿಡಗಳನ್ನು ಸಂರಕ್ಷಿಸಿಕೊಂಡು ಪಾರ್ಕ್ ಹೇಗೆ ನಿರ್ಮಾಣ ಮಾಡಬೇಕೆಂಬುವುದಕ್ಕೆ ದಂಡಕಾರಣ್ಯ ಮಾದರಿಯಾಗಿದೆ.– ಭುವನೇಶ್ ಗೇರುಕಟ್ಟೆ, ಬೆಳ್ತಂಗಡಿ
ವಿಶೇಷ ಅನುಭವವನ್ನು ನೀಡಿದೆ. ಬಹುವರ್ಷಗಳ ಹಳೆಯ ಮರಗಳನ್ನು ನೋಡುವುದೆ ಒಂದು ಸೌಭಾಗ್ಯ.- ಜಾರಪ್ಪ ಪೂಜಾರಿ, ಬೆಳಾಲು