• Slide
    Slide
    Slide
    previous arrow
    next arrow
  • ಹೋರಾಟಕ್ಕೆ ಸಕಾರಣ,ಸದುದ್ದೇಶವಿದೆ, ಪರಿಸರ ರಕ್ಷಣೆಯೇ ನಮ್ಮ ಗುರಿ: ಸ್ವರ್ಣವಲ್ಲೀ ಶ್ರೀ

    300x250 AD

    ಯಲ್ಲಾಪುರ: ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಪಕ್ಷಬೇಧ ಮರೆತು ಸರ್ಕಾರಕ್ಕೆ ನಮ್ಮ ಧ್ವನಿಯನ್ನು ಮುಟ್ಟಿಸಬೇಕು. ಜುಲೈ ತಿಂಗಳ ಅಧಿವೇಶನದಲ್ಲೂ ಈ ಬಗೆಗೆ ಧ್ವನಿ ಎತ್ತಬೇಕು ಎಂದು ಸ್ವರ್ಣವಲ್ಲಿಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
    ಅವರು ತಾಲೂಕಿನ ಮಂಚಿಕೇರಿ ಸಮಾಜ ಮಂದಿರದಲ್ಲಿ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ ಮತ್ತು ವರದಾ ನದಿ ಜೋಡಣೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
    ಅಘನಾಶಿನಿ, ಕಾಳಿ, ಶರಾವತಿ ನದಿಗಳ ಸಂರಕ್ಷಣೆಗೂ ಹೋರಾಟ ಆಗಬೇಕು. ಯಾರಿಗೂ ಅನ್ಯಾಯ ಮಾಡುವುದು ನಮ್ಮ ಉದ್ದೇಶವಲ್ಲ, ಪರಿಸರ ಉಳಿಸುವುದೇ ನಮ್ಮ ಗುರಿ ಎಂದ ಅವರು, ಕಾರಣವಿಲ್ಲದೇ ಹೋರಾಟ ನಡೆಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ನಮ್ಮ ಹೋರಾಟಕ್ಕೆ ಸಕಾರಣವಿದೆ, ಸರಿಯಾದ ಉದ್ದೇಶವೂ ಇದೆ ಎಂದು ಸ್ಪಷ್ಟಪಡಿಸಿದರು.
    ಯೋಜನೆಯನ್ನು ವಿರೋಧಿಸಲು ಬಲವಾದ ಕಾರಣವಿದೆ. ನಮ್ಮ ಒಂದು ಜಿಲ್ಲೆಗೇ ಸಾಲದ ನೀರು, ಐದು ಜಿಲ್ಲೆಗೆ ಹೇಗೆ ಸಾಕಾಗಬಹುದು, ನಮಗೂ ಲಾಭವಿಲ್ಲದ, ಅವರಿಗೂ ಲಾಭವಿಲ್ಲದ ಈ ಯೋಜನೆಯನ್ನು ಯಾಕೆ ಜಾರಿಗೆ ತರಬೇಕು,ಯೋಜನೆಯ ಜಾರಿಯಿಂದ ಮೀನುಗಾರರಿಗೆ ಕಷ್ಟ ಎದುರಾಗಲಿದೆ. ಯಾರು ಯೋಜನೆಯನ್ನು ಬೆಂಬಲಿಸುತ್ತಿದ್ದಾರೋ ಅವರೂ ಸಹ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿದರು. ಸರ್ಕಾರ ಇಂತಹ ಯೋಜನೆ ಜಾರಿಗೆ ತರುವ ಬದಲು ನೀರಿನ ಕೊರತೆ ಇರುವಲ್ಲಿ ಮಳೆ ನೀರಿನ ಕೊಯ್ಲನ್ನು ಕಡ್ಡಾಯ ಮಾಡಲಿ. ವಿನಾಶಕಾರಿ ಯೋಜನೆಗಳನ್ನು ತರುವುದನ್ನು ನಿಲ್ಲಿಸಲಿ ಎಂದರು.
    ಜನಾಂದೋಲನ, ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ರಾಜಕೀಯ ಒತ್ತಡ ಹಾಗೂ ಸಹಕಾರಿ ಸಂಘಗಳಿಂದ ತಮ್ಮ ವ್ಯಾಪ್ತಿಯ ಜನರ ಸಹಿ ಸಂಗ್ರಹ ಅಭಿಯಾನದ ಮೂಲಕ ಯೋಜನೆಯನ್ನು ವಿರೋಧಿಸಿ ಬಲವಾದ ಹೋರಾಟ ಮಾಡಬೇಕಾಗಿದೆ. ಎಂದರು.


    ಸೋಂದಾ ಜೈನಮಠದ ಶ್ರೀಜಗದ್ಗುರು ಅಕಲಂಕ ಕೇಸರಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಮ್ಮಲ್ಲೇ ನೀರಿನ ಕೊರತೆ ಇರುವಾಗ ಬೇರೆಡೆ ನೀರು ಹರಿಸುವುದು ಕಷ್ಟ. 2000 ಎಕರೆಯಷ್ಟು ಭೂಮಿ ಈ ನದಿ ಜೋಡಣೆ ಯೋಜನೆಯಿಂದ ಹಾಳಾಗುತ್ತದೆ. ಜನಜೀವನದ ಅಸ್ತವ್ಯಸ್ತತೆ, ವನ್ಯಜೀವಿಗಳು ಹಾಗೂ ಪರಿಸರ ನಾಶದ ಬಗೆಗೂ ಗಮನ ಹರಿಸಬೇಕು. ದ್ರವ್ಯ, ಕ್ಷೇತ್ರ, ಕಾಲ, ಭಾವವನ್ನು ನೋಡಿ ಸರ್ಕಾರ ಯಾವುದೇ ಯೋಜನೆ ಜಾರಿಗೆ ತರಬೇಕು ಎಂದರು.
    ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆ ಆರಂಭಿಕ ಹಂತದಲ್ಲಿದ್ದು, ಈಗಲೇ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡರೆ ಸಾಲದು. ಸಹಿ ಸಂಗ್ರಹ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿರೋಧಿಸಿ, ಯೋಜನೆ ಕೈಬಿಡುವಂತಾಗಬೇಕು ಎಂದರು.
    ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಯೋಜನೆಯ ವಿಚಾರದಲ್ಲಿ ಜನರ ಭಾವನೆಯ ಜತೆಗೆ ನಮ್ಮ ಭಾವನೆ ಜೋಡಿಸಲು ನಿರ್ಣಯಿಸಿದ್ದೇನೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸೇರಿ ಯೋಜನೆಯಿಂದಾಗುವ ಪರಿಣಾಮಗಳ ಕುರಿತು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಬದ್ಧ.ಅಭಿವೃದ್ಧಿ ಕಾರ್ಯಕ್ಕಾಗಿ ಜಿಲ್ಲೆ ಕಳೆದುಕೊಂಡದ್ದು ಬಹಳಷ್ಟಿದೆ. ಯೋಜನೆಯ ಬಗೆಗೆ ಸರಿಯಾದ ಅಧ್ಯಯನ ಮಾಡುತ್ತೇನೆ. ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
    ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸೂಕ್ಷ್ಮ ಪರಿಸರ ವಲಯದಲ್ಲಿ ಯೋಜನೆ ಜಾರಿಗೆ ತರುವುದು ಸೂಕ್ತವಲ್ಲ. ಇಂತಹ ಯೋಜನೆಗಳಿಂದ ಪರಿಸರಕ್ಕೆ, ರೈತರಿಗೆ, ವನವಾಸಿಗಳಿಗೆ ತೊಂದರೆಯಾಗುತ್ತದೆ. ಇಲ್ಲಿನ ನೆಲ, ಜಲ, ಅರಣ್ಯ ಸಂರಕ್ಷಣೆಗಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಒಕ್ಕೊರಲಿನ ಹೋರಾಟ ನಡೆಯಬೇಕು. ಸರ್ಕಾರ ಜಾರಿಗೆ ತರಲು ಇಚ್ಛಿಸಿದ ಯೋಜನೆಗೆ ತಾತ್ವಿಕ ವಿರೋಧ ವ್ಯಕ್ತಪಡಿಸುತ್ತೇನೆ. ಅಧಿವೇಶನದಲ್ಲೂ ಈ ಕುರಿತು ಪ್ರಸ್ತಾಪಿಸುತ್ತೇನೆ ಎಂದರು.


    ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜನ ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದರೆ ಸರ್ಕಾರ ಅದಕ್ಕೆ ಮಣಿಯಬೇಕಾಗುತ್ತದೆ. ಕಾನೂನು, ವ್ಯವಸ್ಥೆಗಳನ್ನು ಬಳಸಿಕೊಂಡು ಜಿಲ್ಲೆಯ ಪರಿಸರದ ಉಳಿವಿಗಾಗಿ ಹೋರಾಟ ನಡೆಸೋಣ. ಎಲ್ಲಾ ಗ್ರಾಮ ಪಂಚಾಯಿತಿಗಳು ಗ್ರಾಮಸಭೆಯಲ್ಲಿ ಯೋಜನೆ ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದರು.
    ವಿವಿಧ ಕ್ಷೇತ್ರಗಳ ತಜ್ಞರಾದ ಡಾ.ಬಾಲಚಂದ್ರ ಸಾಯೀಮನೆ, ರಾಮಕೃಷ್ಣ ದುಂಡಿ, ಶಿವಾನಂದ ಕಳವೆ, ಡಾ.ಜಿ.ವಿ.ಹೆಗಡೆ, ಡಾ.ಕೇಶವ ಕೊರ್ಸೆ, ಶಶಿಭೂಷಣ ಹೆಗಡೆ, ವಾ.ಕ.ರ.ಸಾ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ, ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಇತರರಿದ್ದರು. ಎಂ.ಕೆ.ಭಟ್ಟ ಯಡಳ್ಳಿ, ಗಣಪತಿ ಬಿಸ್ಲಕೊಪ್ಪ, ನಾರಾಯಣ ಗಡಿಕೈ ನಿರ್ವಹಿಸಿದರು. ರಾಧಾ ಹೆಗಡೆ ನಿರ್ಣಯ ಮಂಡಿಸಿದರು. ಶಿರಸಿ, ಯಲ್ಲಾಪುರ ಭಾಗದ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

    300x250 AD

    ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

    • ಬೇಡ್ತಿ-ವರದಾ ನದಿ ಜೋಡಣೆ ಅವ್ಯವಹಾರಿಕ ಹಾಗೂ ಅವೈಜ್ಞಾನಿಕವಾಗಿದೆ. ಅರಣ್ಯ, ವನ್ಯಜೀವಿಗಳಿಗೆ ಆಪತ್ತು ತರಲಿದೆ. ಮಲೆನಾಡಿನ ವನವಾಸಿಗಳು ಮತ್ತು ರೈತರಿಗೆ ಮಾರಕವಾಗಲಿದೆ. ಈ ಕಾರಣಗಳಿಂದ ಬೇಡ್ತಿ ಕಣಿವೆಯ ಜನತೆ ಕಳೆದ 20 ವರ್ಷಗಳಿಂದ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ರದ್ದು ಮಾಡಬೇಕು.
    • ಉ.ಕ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಸದರು. ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಬೇಡ್ತಿ -ವರದಾ ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರಕಾರಕ್ಕೆ ಒತ್ತಡ ಹಾಕಬೇಕು.
    • ಕಾಳಿ, ಕಣಿವೆಯ ಜನರು ಕಾಳಿ ನದಿ ತಿರುಗಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತ ಮಾಡುತ್ತಿದ್ದಾರೆ. ಈ ಸಮಾವೇಶ ಕಾಳಿ ಕಣಿವೆಯ ಮಣ್ಣಿನ ಮಕ್ಕಳ ಬೇಡಿಕೆಗೆ ಬೆಂಬಲ ನೀಡುತ್ತದೆ.
    • ಎತ್ತಿನಹೊಳೆ ನದೀ ತಿರುವು ಬೃಹತ್ ಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣಭಾರತದ ನೀರಿನ ಸುರಕ್ಷತೆಯ ದೃಷ್ಟಿಯಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬೇಡ್ತಿ, ಅಘನಾಶಿನಿ, ಕಾಳಿ, ಶರಾವತಿ, ಇತ್ಯಾದಿ ನದಿ ತಿರುವು, ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ಬೇಡ್ತಿ ಸಮಾವೇಶ ಆಗ್ರಹದ ಮನವಿ ಮಾಡುತ್ತದೆ.
    Share This
    300x250 AD
    300x250 AD
    300x250 AD
    Leaderboard Ad
    Back to top