ಕಾರವಾರ: ರಕ್ತದಾನ ಅತ್ಯಂತ ಶ್ರೇಷ್ಠ ದಾನಗಳಲ್ಲೊಂದು. ರಕ್ತದಾನ ಮಾಡುವುದರಿಂದ ಮನಸ್ಸಿನಲ್ಲಿ ಸಾರ್ಥಕತೆಯ ಭಾವನೆಯನ್ನು ಸಹ ಪಡೆಯಬಹುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೆಕರ್ ಹೇಳಿದರು.
ಅಂತರಾಷ್ಟ್ರೀಯ ರಕ್ತದಾನ ದಿನಾಚರಣೆಯ ಅಂಗವಾಗಿ ಮಂಗಳವಾರ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಹಾಗೂ ರೋಟರಿ ಕಾರವಾರ ಪಶ್ಚಿಮ ಇವರ ಸಹಯೋಗದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ಗೃಹರಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹೋಗಬೇಕು. ರಕ್ತದಾನ ಮಾಡಲು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನೊಂದು ಜೀವವನ್ನು ಕಾಪಾಡಿದ ಸಂತೃಪ್ತ ಭಾವನೆಯನ್ನು ಪಡೆಯಬಹುದು. ಸದಾ ಸಮಾಜದಲ್ಲಿ ಕಾನೂನು, ಶಾಂತಿ, ಸುವ್ಯವಸ್ಥತೆ ಕಾಪಾಡುವಲ್ಲಿ ವ್ಯಸ್ತರಾಗಿರುವ ಪೋಲಿಸರು, ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಜೊತೆಗೆ ಇತರರಿಗೂ ಮಾದರಿ ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ, ರೋ.ಪ್ರಾದಾನ್ಯ ಪಾಟೀಲ್, ಹೆಚ್ಚುವರಿ ಎಸ್.ಪಿ ಎಸ್.ಬದರಿನಾಥ್, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಾ.ವೆಂಕಟೇಶ್, ಡಿವೈಎಸ್ಪಿ ವೆಲೆಂಟನ್ ಡಿಸೋಜಾ, ರೋ.ನಿತೀನ್ ದೇಸಾಯಿ, ರೋ.ಜಸ್ಟೀನ್ ಫರ್ನಾಂಡೀಸ್ ಸೇರಿದಂತೆ ಹಲವರು ಇದ್ದರು.
ಶಿವಾನಂದ ನಾಯಕ ಸ್ವಾಗತಿಸಿದರು. ಪಲ್ಲವಿ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುಮಾರು 51 ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗೃಹರಕ್ಷಕರು ರಕ್ತದಾನ ಮಾಡಿದರು. ಜೊತೆಗೆ ಗೃಹರಕ್ಷಕದ ಸದಸ್ಯರುಗಳಿಗೆ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.