ಕಾರವಾರ: ದೈವಜ್ಞ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇಲ್ಲ. ನಮ್ಮನ್ನು ಕೇವಲ ಕಾರ್ಯಕರ್ತರಾಗಿ ಬಳಸಿಕೊಳ್ಳಲಾಗುತ್ತಿದ್ದು, ದೈವಜ್ಞ ಸಮಾಜವನ್ನು ನಿರ್ಲಕ್ಷಿಸಲಾಗಿದೆ ಎಂದು ದೈವಜ್ಞ ಸಮಾಜದ ಮುಖಂಡ ವಿಜಯ್ ವರ್ಣೇಕರ್ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನ- ಬೆಳ್ಳಿಯ ದರ ಏರಿಕೆಯಾಗಿದ್ದು, ಕಾರ್ಮಿಕರ ಬದುಕು ಕಷ್ಟವಾಗಿದೆ. ಸರ್ಕಾರ ನಮ್ಮ ಕಡೆ ನೋಡುತ್ತಿಲ್ಲ. 18 ವಿಧಾನಸಭೆ ಮತ್ತು 5 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸುತ್ತಿದ್ದೇವೆ. ಒಂದು ಪಕ್ಷಕ್ಕೆ ಬ್ರಾಂಡ್ ಆಗಿದ್ದೇವೆ. 2013, 2018ರಲ್ಲಿ ನಮಗೆ ಟಿಕೆಟ್ ತಪ್ಪಿಸಲಾಯಿತು. ನಮಗಿಂತ ಕಡಿಮೆ ಜನಸಂಖ್ಯೆ ಇರುವ ಸಮಾಜಕ್ಕೆ ಎರಡು ಮಂತ್ರಿ ಸ್ಥಾನ, ಕೇಂದ್ರದಲ್ಲಿ ಹಲವು ಸಚಿವ ಸ್ಥಾನ ನೀಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೈವಜ್ಞ ಸಮಾಜದ ರಾಷ್ಟ್ರೀಯ ಅಧ್ಯಕ್ಷ ದೆಹಲಿಯ ದಿನಕರ ಬೈಕೇರಿಕರ್ ಮಾತನಾಡಿ, ನಮ್ಮ ಭಾವನೆಗಳನ್ನು ಸರಕಾರಕ್ಕೆ ತಿಳಿಸಬೇಕಿದೆ. ಬಂಗಾರ, ವಜ್ರ, ವೈಢೂರ್ಯ ವ್ಯವಹಾರ ಮಾಡಿ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಾವು ಓಬಿಸಿಯಲ್ಲಿದ್ದೇವೆ. ನಮ್ಮ ವಿದ್ಯೆ ನಾವೇ ಕಲಿಯುತ್ತೇವೆ. ಆದರೆ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದರು. ಭಿಕ್ಷೆ ಬೇಡುವುದು ನಮ್ಮ ಸ್ವಭಾವವಲ್ಲ. ನಮ್ಮ ಶ್ರಮಕ್ಕೆ ಸರ್ಕಾರವೇ ನೆರವು ನೀಡಬೇಕು. ನಮ್ಮನ್ನ ಸರ್ಕಾರ ನಿರ್ಲಕ್ಷಿಸಿದೆ ಎಂದರು.
ನಮ್ಮನ್ನು ಕರ್ನಾಟಕದಲ್ಲಿ ನಿರ್ಲಕ್ಷಿಸಿದೆ. ಮಹಾರಾಷ್ಟ್ರದಲ್ಲಿ ಪ್ರಾತಿನಿಧ್ಯವಿದೆ. ಹಣ, ಅಧಿಕಾರ, ದೈಹಿಕ ಶಕ್ತಿ ಸಮಾಜಕ್ಕೆ ಬೇಕು. ಇವತ್ತು ಮಂತ್ರಿಗಳ ಜೊತೆ ನಾಲ್ಕು ನಾಲ್ಕು ಗೂಂಡಾ ಇರುತ್ತಾರೆ. ಹಾಗಾಗಿ ಇನ್ನಾದರೂ ಸರ್ಕಾರ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಲಿ ಎಂದರು.
ಮಾಜಿ ಶಾಸಕ ಗಂಗಾಧರ ಭಟ್, ಧಾರವಾಡದ ರವಿ ಗಾಂವ್ಕರ್ ಸೇರಿದಂತೆ ಮಂಗಳೂರು, ಕೇರಳ, ಗೋವಾ ದೈವಜ್ಞ ಸಮಾಜದ ಮುಖಂಡರು ಇದ್ದರು.