ಶಿರಸಿ: ಇತ್ತೀಚಿನ ದಿನದಲ್ಲಿ ಕುಟುಂಬ ಪದ್ಧತಿ ಬದಲಾಗುತ್ತಿದ್ದು, ಮನೆಯಲ್ಲಿ ಸಂವಾದದ ಕೊರತೆಯಿಂದ ಒತ್ತಡ ಉಂಟಾಗುತ್ತಿದೆ. ಒಳ್ಳೆಯ ಸಂಸ್ಕೃತಿಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗತಿವಿಧಿಗಳಲ್ಲೊಂದಾದ ಕುಟುಂಬ ಪ್ರಬೋಧನ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ಪ.ರಾ. ನಾಗರಾಜ ಹೇಳಿದರು.
ಅವರು ಇತ್ತೀಚೆಗೆ ನಗರದ ರುದ್ರದೇವರ ಮಠದಲ್ಲಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಮನೆಗಳ ಪರಿಸ್ಥಿತಿ ಬದಲಾಗಿದೆ. ತನಾವಯುಕ್ತ, ವಿವಾದಯುಕ್ತ ಮನೆಯಾಗಿದೆ. ಮನೆಗಳು ಸಂವಾದಯುಕ್ತ ಆದಾಗ ಮಾತ್ರ ಮನೆ ಆನಂದಯುಕ್ತ ಮನೆಯಾಗಲು ಸಾಧ್ಯವಿದೆ. ಮುಂಜಾನೆ ಏಳುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಹೇಳುವ ದೇಶ ಭಾರತದ್ದಾಗಿದ್ದು, ಮಂಗಲ ಪ್ರಭಾತದ ಮನೆಗಳಿಂದ ಧನಾತ್ಮಕ ಬದಲಾವಣೆ ಸಾಧ್ಯ ಎಂದರು.
ನಮ್ಮ ಆಚಾರ – ವಿಚಾರಗಳು ಉತ್ತಮವಾಗಬೇಕಿದ್ದರೆ ನಮ್ಮ ಊಟದ ಪದ್ಧತಿಯೂ ಉತ್ತಮವಾಗಬೇಕಿದೆ. ಊಟದಲ್ಲಿನ ಪ್ರತಿ ಅಗಳುಗಳೂ ದೇವರ ಪ್ರತಿರೂಪವಾಗಿದೆ. ಹಾಗಾಗಿ ಅನ್ನವನ್ನು ಚೆಲ್ಲಬಾರದು. ನಮ್ಮ ಪ್ರತಿ ಮನೆಯಲ್ಲಿ ಸಾಯಂಕಾಲದ ವೇಳೆಗೆ ದೇವರ ಮಂಗಲ ಭಜನೆಗಳು ನಡೆಯಬೇಕು. ರಾತ್ರಿ ಮಲಗುವ ಮುನ್ನ ಭಗವಂತನ ಸ್ಮರಣೆ ಮಾಡಬೇಕು. ಮನೆ ಸಂಸ್ಕಾರಯುಕ್ತವಾದರೆ, ಭಾರತ ಸಂಸ್ಕಾರಯುಕ್ತವಾಗುತ್ತದೆ. ಸಮಸ್ತ ಭಾರತದ ಪುಟ್ಟ ಪ್ರತಿರೂಪ ನಮ್ಮ ಮನೆಯಾಗಿದೆ. ಪ್ರತಿ ಮನೆಯಲ್ಲಿ ಪ್ರತಿದಿನ ಮಂಗಲ ಪ್ರಭಾತ, ಮಂಗಲ ಭೋಜನ್, ಮಂಗಲ ಭಜನ್, ಮಂಗಲ ಶಯನ್ ಖಡ್ಡಾಯವಾಗಬೇಕು ಎಂದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಯೋಜಕ ಸು. ಕೃಷ್ಣಮೂರ್ತಿ ಪ್ರಸ್ತಾವಿಕ ಮಾತನಾಡಿ, ಹಿಂದೂ ಸಮಾಜದ ಪ್ರತಿ ಕುಟುಂಬದ ಯೋಗಕ್ಷೇಮಕ್ಕಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ನಮ್ಮ ಭಾಷೆ, ವೇಷ-ಭೂಷಣ ಬೇರೆ ಬೇರೆಯಿದ್ದರೂ ನಾವೆಲ್ಲ ಒಂದಾಗಿ ಹಿಂದೂ ಸಮಾಜದಲ್ಲಿ ಬೆರೆತಿದ್ದೇವೆ. ದೇಶ ಸಮೃದ್ಧಿಯಿಂದಿರಲು ರಾಷ್ಟ್ರದ ಪ್ರತಿ ಕುಟುಂಬದ ಆರೋಗ್ಯ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ನಗರದ ವಿವಿಧ ಸಮುದಾಯದಿಂದ 25 ಕ್ಕೂ ದಂಪತಿಗಳು ಪಾಲ್ಗೊಂಡು, ಸತ್ಯನಾರಾಯಣ ಪೂಜೆ ನೆರವೇರಿಸಿದರು. ಶಿರಸಿ ಜಿಲ್ಲಾ ಆರೋಗ್ಯ ಭಾರತೀ ಸಂಯೋಜಕ ನಾಗೇಶ್ ಜೀ ವಂದಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಗೋಪಾಲ ದೇವಾಡಿಗ, ಸುನೀಲ ಗರಡಿ, ರಾಜೇಶ ತಾರಗೋಡು, ಪಂಚಾಕ್ಷರಿ, ಶ್ರೀನಿವಾಸ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ನಡೆಯಿತು.