ಸಿದ್ದಾಪುರ: ರೈತರು ತಮ್ಮಿಂದ ಸಾಕಲು ಸಾಧ್ಯವಾಗದೆ ಇರುವಂತಹ ಗೋವುಗಳನ್ನು ಇಲ್ಲಿಗೆ ತಂದು ಕೊಡುತ್ತಿದ್ದಾರೆ. ಅವುಗಳ ಸಾಕಾಣಿಕೆ ಜವಾಬ್ದಾರಿಯನ್ನು ಗೋಸ್ವರ್ಗದ ಮುಖಂಡರು ವಹಿಸಿಕೊಂಡಿರುವುದು ತುಂಬಾ ಸಂತೋಷ. ಇಲ್ಲಿನ ಗೋವುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಲು ತುಂಬಾ ಬೇಸರವಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ್ ಹೇಳಿದರು.
ಅವರು ತಾಲೂಕಿನ ಬಾನ್ಕುಳಿ ಮಠದ ಗೋಸ್ವರ್ಗದಲ್ಲಿ ಗೋವುಗಳಿಗೆ ಆಮ್ ಆದ್ಮಿ ಪಾರ್ಟಿ, ರೈತ ಸಂಘ ಹಾಗೂ ಹಸಿರು ಸೇನೆಗಳ ತಾಲೂಕು ಘಟಕದ ವತಿಯಿಂದ ಮೇವು ವಿತರಣೆ ಮಾಡಿ ಮಾತನಾಡಿದರು.
ಅಂದಾಜಿನ ಪ್ರಕಾರ ಇಲ್ಲಿರುವ 850 ಹಸುಗಳಿಗೆ ಹಾಗೂ ನೌಕರರಿಗೆ ಸೇರಿ ದಿನವೊಂದಕ್ಕೆ ಒಂದು ಲಕ್ಷ ರೂಪಾಯಿ ಖರ್ಚು ತಗುಲಬಹುದು. ಈ ನಿಟ್ಟಿನಲ್ಲಿ ನಾವು ಸಹ ಈ ಪುಣ್ಯ ಕಾರ್ಯದಲ್ಲಿ ಒಂದಿಷ್ಟು ಕೈಜೋಡಿಸಬೇಕೆಂದು ರೈತ ಸಂಘದವರಾದ ನಾವು ರೈತರ ಪರವಾಗಿ ಇಲ್ಲಿನ ಹಸುಗಳಿಗೆ ಒಂದಿಷ್ಟು ಆಹಾರ ಕೊಡುವ ಅಭಿಯಾನ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ನಮ್ಮ ತಾಲೂಕಿನಲ್ಲಿರುವ ಎಲ್ಲ ರೈತರು ತಮ್ಮ ಕೈಲಾದಷ್ಟು ಮೇವನ್ನು ನೀಡಿದರೆ ಈ ಮಠ ಯಶಸ್ವಿಯಾಗಿ ಗೋವುಗಳನ್ನು ಸಾಕಿ ಸಲಹುವ ಕಾರ್ಯಕ್ರಮ ಮಾಡಲಿದೆ ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಆಕಾಶ್ ಕೊಂಡ್ಲಿ ಮಾತನಾಡಿ, ಬಿಜೆಪಿ ಪಕ್ಷ ಗೋಮಾತೆ ಹೆಸರಿನಲ್ಲಿ ಆಡಳಿತಕ್ಕೆ ಬಂದಿದೆ. ಈ ಪಕ್ಷದ ಒಬ್ಬೊಬ್ಬ ಶಾಸಕರು ಒಂದೊಂದು ಲಕ್ಷ ರೂಪಾಯಿಯನ್ನು ಪ್ರತಿಯೊಂದು ತಿಂಗಳು ಕೊಟ್ಟರೆ ಇಲ್ಲಿರುವ ಎಲ್ಲಾ ಆಕಳುಗಳಿಗೆ ಸಂಪನ್ನವಾದ ಆಹಾರ ಸಿಗಲಿದೆ. ಹಾಲಿ ಬಿಜೆಪಿ ಪಕ್ಷದಲ್ಲಿ 120 ಶಾಸಕರಿದ್ದಾರೆ. ಅವರೆಲ್ಲರೂ ದಿನದ 24 ಗಂಟೆಯೂ ನಾವು ಆಕಳನ್ನು ರಕ್ಷಣೆ ಮಾಡುತ್ತೇವೆ, ಆಕಳನ್ನು ಒಳ್ಳೆಯ ರೀತಿಯಾಗಿ ಸಾಕುತ್ತೇವೆ ಎಂದು ಹೇಳುತ್ತಾರೆ. ಅವರ ಈ ಹೇಳಿಕೆ ಕೇವಲ ಬಾಯಿಮಾತಿನಲ್ಲಿ ಇರಬಾರದು, ಪ್ರತಿಯೊಬ್ಬ ಎಂಎಲ್‌ಎಯು ಪ್ರತಿ ತಿಂಗಳು ಈ ಗೋ ಸ್ವರ್ಗದ ನಿರ್ವಹಣೆಗಾಗಿ ಒಂದು ಲಕ್ಷ ರೂಪಾಯಿ ನೀಡಬೇಕೆಂದು ಈ ಮೂಲಕ ನಾನು ಆಗ್ರಹಿಸುತ್ತೇನೆ. ಕೇವಲ ಆಕಳುಗಳನ್ನು ಹಿಡಿದುಕೊಂಡು ಬಂದು ಈ ಮಠದಲ್ಲಿ ಬಿಟ್ಟರೆ ಆಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ನಾಯ್ಕ್, ತಾಲೂಕು ಅಧ್ಯಕ್ಷ ಲಕ್ಷ್ಮಣ ನಾಯ್ಕ್, ಹನೀಫ್, ಹಿತೇಂದ್ರ ನಾಯ್ಕ್, ಕೆರಿಯಪ್ಪ ನಾಯ್ಕ್, ಸ್ಥಳೀಯ ಮುಖಂಡರು ಗೋ ಸ್ವರ್ಗ ದ ವ್ಯವಸ್ಥಾಪಕ ಮಧು ಇದ್ದರು.