ಭಟ್ಕಳ: ಬೇಂಗ್ರೆಯಲ್ಲಿರುವ ಉಸಿರಾ ಇಂಡಸ್ಟ್ರೀಸ್ ಬೆಟ್ಟದ ಇಳಿಜಾರಿನಲ್ಲಿರುವ 5 ಎಕರೆ ಕೃಷಿಭೂಮಿಯಲ್ಲಿ ವಿವಿಧ ಜಾತಿಯ ಔಷಧಿ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿತು.
ಉಪವಿಭಾಗಾಧಿಕಾರಿ ಮಮತಾದೇವಿ ಔಷಧಿ ಸಸ್ಯಗಳನ್ನು ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯಮಿ ಎಂ.ಡಿ.ಮ್ಯಾಥ್ಯೂರವರು ಈ ಭಾಗದಲ್ಲಿ ಪರಿಸರಕ್ಕೆ ಪೂರಕವಾದ ಕರಕುಶಲ ಉದ್ಯಮ ಪ್ರಾರಂಭಿಸಿ ಅನೇಕ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಕಳೆದ ತಿಂಗಳು ಜಿಲ್ಲಾಧಿಕಾರಿಗಳು ಇವರ ಉದ್ಯಮಕ್ಕೆ ಭೇಟಿ ನೀಡಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಮ್ಯಾಥ್ಯೂರವರ ಈ ಉತ್ತಮ ಕೆಲಸಕ್ಕೆ ನಮ್ಮ ಸಹಕಾರ ಸದಾ ಇರುವುದಾಗಿ ತಿಳಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಯಲ್ಲಮ್ಮ ಮರಿಸ್ವಾಮಿ ಮಾತನಾಡಿ, ಪರಿಸರ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಸಿರಾ ಇಂಡಸ್ಟ್ರೀಸ್ ಮಾಲಕ ಎಂ.ಡಿ.ಮ್ಯಾಥ್ಯು ಮಾತನಾಡಿ, ಈ ಸುಂದರವಾದ ಪರಿಸರದಲ್ಲಿ ವಿವಿಧ ಜಾತಿಯ ಔಷಧೀಯ ಗುಣಗಳಿರುವ ಸಸ್ಯಗಳು, ಹಣ್ಣುಗಳು, ತರಕಾರಿಗಳನ್ನು ಬೆಳಸುವುದರ ಜೊತೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವಂತಹ ಶೈಕ್ಷಣಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕನಸಿದೆ. ಇದಕ್ಕೆ ಎಲ್ಲರ ಸಹಕಾರ ಸದಾ ಇರಲಿ ಎಂದು ಕೋರಿದರು.
ಮುಖ್ಯ ಅತಿಥಿ ಕೆ.ಮರಿಸ್ವಾಮಿ, ಮುರ್ಡೇಶ್ವರದಂತೆ ಭಾರತದ ಭೂಪಟದಲ್ಲಿ ಉಸಿರಾ ಔಷಧಿ ಸಸ್ಯಗಳ ಉದ್ಯಾನವನದ ಶೈಕ್ಷಣಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ವೇದಿಕೆಯಲ್ಲಿದ್ದ ಮಂಗಳೂರು, ಉಡುಪಿ ಜಿಲ್ಲಾ ಕೌಶಲ್ಯ ಮತ್ತು ಜೀವನೋಪಾಯ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಮತ್ತು ಭಟ್ಕಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತ ಕರ್ಕಿ ಹಾಗೂ ಊರಿನ ಮುಖಂಡರು ಶುಭ ಹಾರೈಸಿದರು. ಕಾರ್ಯಕ್ರಮದ ಮೊದಲಿಗೆ ಸಂಧ್ಯಾ ಪ್ರಭು ಪ್ರಾರ್ಥಿಸಿದರು. ಸುನಂದ ನಾಯಕ್ ಸ್ವಾಗತಿಸಿದರು. ಅಕ್ಷತಾ ಮುರುಡೇಶ್ವರ ವಂದಿಸಿದರು. ಇದೇ ಸಂದರ್ಭದಲ್ಲಿ ಬೇಂಗ್ರೆ ಗ್ರಾಮದ ರ‍್ಯಾಂಕ್ ವಿಜೇತ ವಿದ್ಯಾರ್ಥಿ ಮಹಾಮ್ಮಾಯ ಭಟ್ ಅವರಿಗೆ ನೆರೆದ ಅತಿಥಿಗಳಿಂದ ಸನ್ಮಾನಿಸಲಾಯಿತು.