ಅಂಕೋಲಾ: ಒಬ್ಬ ವ್ಯಕ್ತಿ ತಾನು ಬೆಳೆಯುವುದರ ಜೊತೆಗೆ ಸಮಾಜಕ್ಕೆ ಉಪಕಾರಿಯಾಗಿ, ಮಾದರಿಯಾಗಿ ಬದುಕಿದಾಗ ಆತನ ಜೀವನ ಸಾರ್ಥಕವಾಗುತ್ತದೆ. ತಮ್ಮ 88ನೇ ಇಳಿಯ ವಯಸ್ಸಿನಲ್ಲಿಯೂ ಜೀವನೋತ್ಸಾಹದಿಂದ ಬದುಕುತ್ತಿರುವ ಸಾಹಿತ್ಯ ಪ್ರೇಮಿ, ಕನ್ನಡದ ಕಟ್ಟಾಳು ಅಂಕೋಲೆ ಸೂರ್ವೆಯ ಮಹಾದೇವ ಹಮ್ಮಣ್ಣ ನಾಯಕರ ಬದುಕು ಸಮಾಜಕ್ಕೆ ಒಂದು ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ರಾಮಕೃಷ್ಣ ಗುಂದಿ ಹೇಳಿದರು.
ಅವರು ಮಿತ್ರ ಸಂಗಮ ಅಂಕೋಲಾ ಹಾಗೂ ಲಾಯನ್ಸ್ ಕ್ಲಬ್ ಕರಾವಳಿ ಜಂಟಿಯಾಗಿ ಬಾಸಗೋಡದ ಮಾದೇವ ಮಾಸ್ತರರ ಮಗಳ ಮನೆಯಂಗಳದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓರ್ವ ಗುರುವಾಗಿ, ಕನ್ನಡ ಪ್ರೇಮಿಯಾಗಿ, ದಾನಿಯಾಗಿ, ಯಕ್ಷಗಾನ ಕಲಾವಿದರಾಗಿ ಅವರು ಬದುಕಿದ ರೀತಿ ಇತರರಿಗೆ ಉದಾಹರಣೆಯಾಗಿದೆ ಎಂದರು. ನೇರ ನುಡಿಯ, ಇತತರ ಕಷ್ಟಕ್ಕೆ ಮಿಡಿಯುವ, ಮಗುವಿನ ಮನಸ್ಸಿನ ಮಾದೇವ ಮಾಸ್ತರರ ಬದುಕು ಇಂದಿನ ಜನಾಂಗಕ್ಕೆ ಆದರ್ಶವಾಗಬೇಕೆಂದರು.
ಗೌರವ ಸ್ವೀಕರಿಸಿ ಮಾತನಾಡಿದ ಮಾದೇವ ಮಾಸ್ತರ ಬದುಕಿನಲ್ಲಿ ಸಮಾಜಕ್ಕೆ ನಾನು ನೀಡಿದ್ದಕ್ಕಿಂತ ನಾನು ಪಡೆದದ್ದೇ ಹೆಚ್ಚು. ನಿಮ್ಮೆಲ್ಲರ ಪ್ರೀತಿ, ವಿಸ್ವಾಸ, ಗೌರವಕ್ಕೆ ನಾನು ಋಣಿಯಾಗಿದ್ದೇನೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು, ಮಾದೇವ ಮಾಸ್ತರರನ್ನು ಗೌರವಿಸುವ ಮೂಲಕ ಒಳ್ಳೆಯತನವನ್ನು ಗೌರವಿಸದಂತಾಗಿದೆ ಎಂದರು. ಸಾಹಿತ್ಯ ಪ್ರೇಮಿಯಾಗಿರುವ ಮಾದೇವ ಮಾಸ್ತರರು ಜಿಲ್ಲೆಯ ಎಲ್ಲೆ ಸಾಹಿತ್ಯಿಕ ಕಾರ್ಯಕ್ರಮಗಳಾದರೂ ಹಾಜರಿರುತ್ತಾರೆ. ಕಡುಬಡತನದಲ್ಲಿ ಪರಿಶ್ರಮದಿಂದ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಬದುಕಿರುವ ಮಾದೇವ ಮಾಸ್ತರರು ಬಹುಕಾಲ ಜನಮಾನಸದಲ್ಲಿ ಸ್ಥಿರವಾಗಿರುತ್ತಾರೆ ಎಂದರು.
ಲೇಖಕ ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದೇವ ಮಾಸ್ತರರು ಪ್ರೀತಿ ವಾತ್ಸಲ್ಯ ಗಣಿಯಾಗಿದ್ದು ಅವರ ಬದುಕು ಹಾಗೂ ಸಾರ್ವಜನಿಕ ಬದುಕು ಹಸನಾಗಿದೆ ಎಂದರು.
ಲಯನ್ಸ್ ಅಧ್ಯಕ್ಷ ಡಾ.ಕರುಣಾಕರ ಎಲ್ಲರನ್ನು ಸ್ವಾಗತಿಸುತ್ತಾ ಮಹಾದೇವ ಮಾಸ್ತರರನ್ನು ಸನ್ಮಾನಿಸುವುದು ನಮ್ಮ ಲಾಯನ್ಸ್ ಕ್ಲಬ್‌ಗೆ ಹೆಮ್ಮೆಯ ಸಂಗತಿ ಎಂದರು. ಜಿ.ಆರ್.ತಾಂಡೇಲ, ಹಸನ್ ಶೇಖ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಶೆಟ್ಟಿ ವಂದಿಸಿದರು. ಸಾಹಿತಿಗಳಾದ ವಿಠ್ಠಲ ಗಾಂವಕರ, ವಸಂತ ನಾಯಕ, ವಿ.ಜಿ.ನಾಯಕ ಅಭಿನಂದನಾಪರ ಮಾತುಗಳನ್ನಾಡಿದರು. ಗಣಪತಿ ನಾಯಕ ಶೀಳ್ಯ, ಕೇಶವಾನಂದ ನಾಯಕ, ಪ್ರೊ.ವೆರ್ಣೇಕರ, ಊರ ನಾಗರಿಕರು, ಕುಟುಂಬದ ಸದಸ್ಯರು ಸಮಾರಂಭದಲ್ಲಿ ಇದ್ದರು.