ಕಾರವಾರ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಒಳಗೊಂಡ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಶೇ 87.27ರಷ್ಟು ಮತದಾನವಾಗಿದ್ದು, ಒಟ್ಟೂ 3,605 ಮತದಾರರ ಪೈಕಿ 3,146 ಮಂದಿ ಮತ ಚಲಾಯಿಸಿದ್ದಾರೆ. 459 ಮಂದಿ ಮತ ಚಲಾಯಿಸಿಲ್ಲ.
ಶೇ 91.5 ಪುರುಷರು ಹಾಗೂ ಶೇ 82.44ರಷ್ಟು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು, ನಿಗದಿತ 15 ಕೇಂದ್ರಗಳಲ್ಲಿ ಸುಗಮವಾಗಿ ಮತದಾನ ನಡೆದಿದೆ. ಜೊಯಿಡಾ ಶೇ 87.34, ರಾಮನಗರ 86.89, ಯಲ್ಲಾಪುರ 90.37, ಕಾರವಾರ 85.3, ಉಳಗಾ ಹಿರಿಯ ಪ್ರಾಥಮಿಕ ಶಾಲೆ 64.94, ಅಂಕೋಲಾ 91.96, ಕುಮಟಾ 93.18, ಗೋಕರ್ಣ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ 85.94, ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆ 84.17, ಭಟ್ಕಳ 81.99, ಸಿದ್ದಾಪುರ 90.91, ಶಿರಸಿ 88.37, ಮುಂಡಗೋಡ 81.75, ಹಳಿಯಾಳ 86.98, ದಾಂಡೇಲಿಯಲ್ಲಿ ಶೇ 93.68ರಷ್ಟು ಮತದಾನವಾಗಿದೆ.
ಒಟ್ಟು ಏಳು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನಿಂದ ಶ್ರೀಶೈಲ್ ಗಡದಿನ್ನಿ, ಪಕ್ಷೇತರ ಅಭ್ಯರ್ಥಿಗಳಾಗಿ ಕರಬಸಪ್ಪ ಮಧ್ಯಾನ್ನದ, ಕೃಷ್ಣವಾಣಿ ಶ್ರೀನಿವಾಸಗೌಡ, ಫಕೀರಗೌಡ ಕಲ್ಲನಗೌಡರ, ವೆಂಕನಗೌಡ ಗೋವಿಂದಗೌಡರ ಚುನಾವಣಾ ಕಣದಲ್ಲಿದ್ದಾರೆ. 8ನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿರುವ ಹೊರಟ್ಟಿ ಈ ಬಾರಿ ಗೆದ್ದರೆ ದಾಖಲೆಯ ವಿಜಯ ಸಾಧಿಸಿದಂತೆ. ಜೂನ್ 15ರಂದು ಬೆಳಗಾವಿಯಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದ್ದು, ಶಿಕ್ಷಕ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.