• Slide
    Slide
    Slide
    previous arrow
    next arrow
  • ಐಷಾರಾಮಿ ಕಾರು ಖರೀದಿ:ಮತ್ತೆ ಟೀಕೆಗೆ ಗುರಿಯಾದ ಮಾರಿಕಾಂಬಾ ದೇಗುಲ ಆಡಳಿತ ಮಂಡಳಿ

    300x250 AD

    ಶಿರಸಿ: ದಕ್ಷಿಣ ಭಾರತದ ಶಕ್ತಿಪೀಠಗಳಲ್ಲೊಂದಾದ ಶ್ರೀಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಭಕ್ತರ ಕಾಣಿಕೆ ಹಣದಲ್ಲಿ ಹೊಸ ಐಶಾರಾಮಿ ಕಾರು ಖರೀದಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣಕಾಸಿನ ಕೊರತೆ ಎನ್ನುವ ಆಡಳಿತ ಮಂಡಳಿ ತಮ್ಮ ಓಡಾಟಕ್ಕೆ ಐಶಾರಾಮಿ ಇನೋವಾ ಕಾರು ಖರೀದಿ ಮಾಡುವ ಅವಶ್ಯಕತೆಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

    ಕೆಲ ದಿನದ ಹಿಂದೆ ದೇವಸ್ಥಾನದ ಅನ್ನದಾಸೋಹ ವಿಭಾಗಕ್ಕೆ ಅಡುಗೆ ತಯಾರಕರ ಹುದ್ದೆಗೆ ಅರ್ಜಿ ಆಹ್ವಾನಿಸುವಾಗ ಒಂದೇ ಜಾತಿಯವರ ಹೆಸರು ನಮೂದಿಸಿದ್ದ ಆಡಳಿತ ಮಂಡಳಿ ವಿರುದ್ಧ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಜನರ ವಿರೋಧದ ಕಾರಣ ಅಂತಿಮವಾಗಿ ಅರ್ಜಿ ಆಹ್ವಾನಿಸಿ ಆದೇಶಕ್ಕೆ ತಡೆ ನೀಡಿ ನೇಮಕಾತಿ ಪ್ರಕ್ರಿಯೆಯನ್ನ ಕೈಬಿಟ್ಟಿತ್ತು. ಇದೀಗ ಇದೇ ಆಡಳಿತ ಮಂಡಳಿ ಐಶಾರಾಮಿ ಕಾರು ಖರೀದಿಸುವ ಮೂಲಕ ಮತ್ತೆ ಚರ್ಚೆಗೆ ಆಸ್ಪದ ನೀಡಿದೆ.

    ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿನಿತ್ಯ ಮಾರಿಕಾಂಬಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಅವರಿಗೆ ಸೂಕ್ತ ವಸತಿ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ ಎನ್ನುವ ಆರೋಪವಿದೆ. ಅಲ್ಲದೇ ರಸ್ತೆಯ ಬದಿಯಲ್ಲೇ ಮಲಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಭಕ್ತರಿಗಿದ್ದು, ಈ ಬಗ್ಗೆ ಆಡಳಿತ ಮಂಡಳಿ ಗಮನಿಸಿ ಭಕ್ತರಿಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಇದನ್ನೆಲ್ಲ ಬಿಟ್ಟು ಕೆಲ ದಿನದ ಹಿಂದೆ ಐಷಾರಾಮಿ ಕಾರನ್ನ ಖರೀದಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಆಡಳಿತ ಮಂಡಳಿಯ ಈ ನಡೆಯನ್ನ ಟೀಕಿಸಿದ್ದಾರೆ.

    ಜಿಲ್ಲಾ ನ್ಯಾಯಾಲಯದ ಆಡಳಿತ ಸುಪರ್ದಿಗೆ ಒಳಪಡುವ ಶಿರಸಿ ದೇವಸ್ಥಾನದ ಆಡಳಿತ ಮಂಡಳಿಯವರ ಓಡಾಟಕ್ಕೆ ಕಳೆದ ಐದು ವರ್ಷದ ಹಿಂದೆ ಟವೇರಾ ಕಾರೊಂದನ್ನ ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಕಾರು ನೀಡಿದರೆ ಹದಿನೈದು ವರ್ಷಗಳ ಕಾಲ ಬದಲಾವಣೆ ಮಾಡುವಂತಿಲ್ಲ. ದೇವಸ್ಥಾನದ ಆಡಳಿತ ಮಂಡಳಿಗೆ ನೀಡಿರುವ ಕಾರಿನಲ್ಲಿ ಸಹ ಯಾವುದೇ ಸಮಸ್ಯೆ ಇದ್ದಂತಿಲ್ಲ. ಆದರೂ ಈ ನಡುವೆ ಆಡಳಿತ ಮಂಡಳಿಯ ಓಡಾಟಕ್ಕೆ ಭಕ್ತರ ಹಣದಲ್ಲಿ ಹೊಸ ಐಷಾರಾಮಿ ಕಾರು ಖರೀದಿ ಮಾಡುವ ಉದ್ದೇಶವಾದರು ಏನಿತ್ತು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ದೇವಸ್ಥಾನದ ಆಡಳಿತ ಮಂಡಳಿಯವರ ಓಡಾಟಕ್ಕೆ ಹೊಸ ಕಾರು ಖರೀದಿ ಮಾಡುವ ಬದಲು ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ, ಭಕ್ತರ ಉಪಯೋಗಕ್ಕೆ ಬಳಸಬಹುದಿತ್ತು. ಒಂದೊಮ್ಮೆ ಆಡಳಿತ ಮಂಡಳಿಗೆ ಕಾರೇ ಓಡಾಟಕ್ಕೆ ಇಲ್ಲದಿದ್ದರೆ ಖರೀದಿ ಮಾಡಿದರೆ ಸುಮ್ಮನಾಗಬಹುದಿತ್ತು. ಆದರೆ ಕಾರಿದ್ದರೂ ವಿನಾಕಾರಣ ಹೊಸ ಐಷಾರಾಮಿ ಕಾರು ಖರೀದಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    300x250 AD

    ಉದ್ಯಮಿಯ ಹೋಟೆಲ್ ಶುಭಾರಂಭಕ್ಕೆ ದೇಗುಲದಿಂದ ಜಾಹೀರಾತು!! ಮಾರಿಕಾಂಬಾ ದೇಗುಲದ ಆಡಳಿತ ಮಂಡಳಿ ಕೇವಲ ಕಾರು ಖರೀದಿಯಷ್ಟೇ ಅಲ್ಲ, ಇತ್ತೀಚಿಗೆ ಉದ್ಯಮಿಯೊಬ್ಬರ ಹೋಟೆಲ್‌ನ ಶುಭಾರಂಭಕ್ಕೆ ಆಡಳಿತ ಮಂಡಳಿ ಹೆಸರಿನಲ್ಲಿ ಶುಭಾಶಯದ ಜಾಹೀರಾತು ಕೂಡ ನೀಡಿತ್ತು. ಭಕ್ತರು ನೀಡುವ ಹಣ ದೇವರಿಗಾಗಿ, ದೇವಸ್ಥಾನದ ಅಭಿವೃದ್ಧಿಗಾಗಿ ಎನ್ನುವುದನ್ನ ಮರೆತು, ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಎಂದುಕೊಂಡು ನೀರಿನಂತೆ ದೇಗುಲದ ಹಣವನ್ನ ಆಡಳಿತ ಮಂಡಳಿ ಖರ್ಚು ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

    ಕೋಟ್…

    ಬನವಾಸಿ ರಸ್ತೆಯಲ್ಲಿ ದೇವಾಲಯದ ಬಳಕೆಗಾಗಿ ನಿರ್ಮಿಸಿದ ಯಾತ್ರಿ ನಿವಾಸಿ ಹಾಳು ಬಿದ್ದಿದೆ. ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರ ಉಪಯೋಗಕ್ಕಾಗಿ ದೇವಸ್ಥಾನದಿಂದ ಅಭಿವೃದ್ಧಿ ಚಟುವಟಿಕೆಗಳನ್ನ ಮಾಡಬಹುದಿತ್ತು. ಅದನ್ನ ಬಿಟ್ಟು ಹೊಸ ಐಷಾರಾಮಿ ಕಾರು ಖರೀದಿ ಮಾಡುವ ಉದ್ದೇಶವಾದರು ಏನಿತ್ತು ಎನ್ನುವುದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕಿದೆ.–· ಮಹಾದೇವ ಚಲವಾದಿ, ಸಾಮಾಜಿಕ ಹೋರಾಟಗಾರ

    ದೇವಸ್ಥಾನದಲ್ಲಿ ಅವಶ್ಯಕತೆಗೆನುಗುಣವಾಗಿ ಹೊಸ ಕಾರನ್ನ ಖರೀದಿ ಮಾಡಲಾಗಿದೆ. ಟೀಕೆ ಮಾಡುವವರು ಮಾಡಲಿ. ಯಾರೇ ಆದರೂ ಸುಖಾಸುಮ್ಮನೆ ವಿರೋಧ ಮಾಡಬಾರದು.–· ಆರ್.ಜಿ.ನಾಯ್ಕ, ಅಧ್ಯಕ್ಷರು


    Share This
    300x250 AD
    300x250 AD
    300x250 AD
    Leaderboard Ad
    Back to top