ಶಿರಸಿ: ಸೇತುವೆ ಇಲ್ಲದೆ ಮಳೆಗಾಲದಿಂದ ಎಂಟು ತಿಂಗಳುಗಳ ಕಾಲ ಹೊರ ಪ್ರಪಂಚದೊಟ್ಟಿಗೆ ಸಂಪರ್ಕವೇ ಇಲ್ಲದಂತೆ ಬದುಕುವ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನಗದ್ದೆಯ ನಿವಾಸಿಗಳಿಂದು ಕಾರವಾರದಲ್ಲಿ ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿದ್ದು, ಚುನಾವಣೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಗಳಲ್ಲಿ ಬಿಳಿ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಮಳೆಗಾಲದಿಂದ ಸುಮಾರು ಎಂಟು ತಿಂಗಳುಗಳ ಕಾಲ ಈ ಹೊಳೆಯಲ್ಲಿ ನೀರು ಹರಿಯುವುದರಿಂದ ಅದನ್ನು ದಾಟುವುದು ಸಾಹಸದ ಕೆಲಸ. ಹೊಳೆಯ ಎರಡೂ ಬದಿಯಲ್ಲಿ ಗ್ರಾಮ ಪಂಚಾಯತಿಯಿಂದ ರಸ್ತೆಯಾಗಿದ್ದು, ಎರಡೂ ಬದಿಯ ರಸ್ತೆಯನ್ನ ಕೂಡಿಸಲು ಹೊಳೆಯ ಮೇಲೆ ಸೇತುವೆಯ ನಿರ್ಮಾಣ ಕಾರ್ಯ ಮಾತ್ರ ಈವರೆಗೆ ಆಗಿಲ್ಲ.
ಕಳೆದ ಅನೇಕ ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಈ ಹಿಂದೆ ಸೇತುವೆ ಮಂಜೂರಿಯಾಗಿತ್ತಂತೆ. ಆದರೆ ಅದನ್ನು ಬೇರೆ ಭಾಗಕ್ಕೆ ವರ್ಗಾಯಿಸುವ ಮೂಲಕ ಮುಗ್ಧ ಹಿಂದುಳಿದ ಒಕ್ಕಲಿಗ ಗೌಡರು ವಾಸಿಸುವ ಈ ಗ್ರಾಮಕ್ಕೆ ಅನ್ಯಾಯ ಮಾಡಲಾಗಿದೆ.
ಸದ್ಯ ಸುಮಾರು 130 ಕಿ.ಮೀ. ಕ್ರಮಿಸಿ ಮಕ್ಕಳು, ವೃದ್ಧರೊಂದಿಗೆ ಊರಿಗೇ ಊರೇ ಕಾರವಾರಕ್ಕೆ ಬಂದು ಜಿಲ್ಲಾಧಿಕಾರಿಗಳನ್ನ ಸೋಮವಾರ ಭೇಟಿಯಾಗಿದೆ. ಈ ವೇಳೆ ಸೇತುವೆ ಇಲ್ಲದೆ ತಾವು ಅನುಭವಿಸುವಿಸುತ್ತಿರುವ ಸಂಕಷ್ಟಗಳನ್ನ ಗ್ರಾಮಸ್ಥರು ಜಿಲ್ಲಾಧಿಕಾರಿ ಬಳಿ ಹೇಳಿಕೊಂಡಿದ್ದು, ಅದರೊಟ್ಟಿಗೆ ಮುಂಬರುವ ಚುನಾವಣೆಗಳನ್ನ ಬಹಿಷ್ಕಾರ ಹಾಕುವುದಾಗಿ ಖಡಾಖಂಡಿತವಾಗಿ ಹೇಳಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಗ್ರಾಮಸ್ಥರ ಅಳಲು ಆಲಿಸಿರುವ ಜಿಲ್ಲಾಧಿಕಾರಿ ಮುಲ್ಪೆ ಮುಗಿಲನ್,ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಸೇತುವೆ ನಿರ್ಮಾಣಗೊಳ್ಳಲು ತಮ್ಮಿಂದಾಗುವ ಕಾರ್ಯಗಳನ್ನ ಮಾಡಿಕೊಡುವುದಾಗಿ ಭರವಸೆ ನೀಡಿದ್ದು, ಭರವಸೆಯ ಬೆಳಕಲ್ಲೆ ಗ್ರಾಮಸ್ಥರು ಸದ್ಯ ಊರಿಗೆ ಮರಳಿದ್ದಾರೆ.