ಹಳಿಯಾಳ:ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಇರುವ ಹೆಚ್ಚಿನ ಕ್ಷೇತ್ರಗಳಿದ್ದು ಹಾಗೂ ಹೆಚ್ಚು ಮಳೆ ಬೀಳುವ ಕ್ಷೇತ್ರಗಳಾಗಿದ್ದು, ಇಲ್ಲಿ ರೋಗ-ಕೀಟಗಳ ಹಾವಳಿ ಪ್ರಾರಂಭವಾದ ನಂತರ ಅವುಗಳನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಅವುಗಳು ಬಾರದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ, ಈ ವರ್ಷ ಮುಂಗಾರು ಬರುವುದು ವಿಳಂಬವಾಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆಗಾಲದ ಪ್ರಾರಂಭದಲ್ಲಿ ಬೆಳೆ ಸಂರಕ್ಷಣೆಯ ದೃಷ್ಟಿಯಿಂದ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಮಹತ್ವದ್ದಾಗಿದ್ದು ರೋಗ-ಕೀಟಗಳ ಮುಂಜಾಗ್ರತಾ ನಿಯಂತ್ರಣ ಕ್ರಮ ಮತ್ತು ಕೈಗೊಳ್ಳಬೇಕಾದ ಇತರೇ ಕೃಷಿ ಕ್ರಮಗಳ ಕುರಿತು ಇಲಾಖೆ ಮಾಹಿತಿ ನೀಡಿದೆ. ಅಡಕೆ ಕೊಳೆ ರೋಗ, ಜಾಯಿಕಾಯಿ ಕಾಯಿ ಕೊಳೆ ರೋಗ ಮತ್ತು ಕೊಕೋ ಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇಕಡಾ ಒಂದರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
ಅಡಕೆಯಲ್ಲಿ ಎಳೆ ಅಡಕೆ ರಸ ಹೀರುವ ಕೀಟದ ಹಾವಳಿಯಿಂದ ಹಸಿ ಅಡಕೆ ಉದುರುತ್ತಿದ್ದರೆ, ಅದರ ನಿಯಂತ್ರಣಕ್ಕೆ ಸೂಕ್ತ ಕೀಟನಾಶಕ ದ್ರಾವಣವನ್ನು ತಂಪು ಹೊತ್ತಿನಲ್ಲಿ ಗೊನೆಗಳಿಗೆ ಸಿಂಪಡಿಸಬೇಕು. ಕಾಳು ಮೆಣಸಿನ ಬಳ್ಳಿಯ ಸೊರಗು ರೋಗ ನಿಯಂತ್ರಣಕ್ಕೆ ಬುಡದ ಸುತ್ತಲೂ ಅರ್ಧ ಕೇಜಿ ಬೇವಿನ ಹಿಂಡಿಯನ್ನು ಟ್ರೈಕೋಡರ್ಮಾ ಸೇರಿಸಿ ಹಾಕಬೇಕು, ಶೇ. 0. 03ರ ಕಾಪರ ಆಕ್ಸಿ ಕ್ಲೋರೈಡ್ ದ್ರಾವಣವನ್ನು ಬಳ್ಳಿಯ ಬುಡಕ್ಕೆ ಕಾಂಡದಗುಂಟ ಸುರಿಯಬೇಕು ಮತ್ತು ಶೇ 1ರ ಬೋರ್ಡೋ ದ್ರಾವಣವನ್ನು ಪೂರ್ತಿ ಬಳ್ಳಿಗೆ ಸಿಂಪಡಿಸಬೇಕು. ಮಳೆ ಪ್ರಾರಂಭವಾಗಿ ಒಂದು ವಾರದ ನಂತರ ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಮುಚ್ಚಿಗೆ ಮಾಡುವುದು, ಹೊಸದಾಗಿ ಕಾಳು ಮೆಣಸಿನ ಸಸಿಗಳನ್ನು ನಾಟಿ ಮಾಡಲು ಸೂಕ್ತ ಸಮಯವಾಗಿದ್ದು, ನಾಟಿ ಮಾಡುವಾಗ ಮೇಲ್ಮಣ್ಣು, ಕಳಿತ ಗೊಬ್ಬರ ಮತ್ತು ಟ್ರೈಕೋಡರ್ಮಾ ಮಿಶ್ರಿತ ಬೇವಿನ ಹಿಂಡಿ ಸೇರಿಸಿ ನೆಲದ ಮಟ್ಟಕ್ಕಿಂತ 2-3 ಇಂಚುಗಳಷ್ಟು ಎತ್ತರಕ್ಕೆ ತುಂಬಿ ಸಸಿಗಳನ್ನು ನಾಟಿ ಮಾಡಬೇಕು,ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ ಆಕ್ಸಿಕ್ಲೋರೈಡ ಶೀಲೀಂದ್ರ ನಾಶಕವನ್ನು 3ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ಬೆಳೆಗಳಿಗೆ ಶಿಫಾರಿತ ರಸ ಗೊಬ್ಬರ ಅಥವಾ ಶಿಫಾರಿತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸಬಹುದಾದ ಸಾವಯವ ರೂಪದ ಗೊಬ್ಬರಗಳನ್ನು ಹಾಕಬೇಕು. ಅಡಕೆ ತೋಟದಲ್ಲಿ ಬಸಿಗಾಲುವೆಗಳನ್ನು ಸ್ವಚ್ಛಗೋಳಿಸಿ, ನೀರು ಬಸಿದು ಹೋಗುವಂತೆ ಸುಸ್ಥಿತಿಯಲ್ಲಿಡಬೇಕು. ಮಾಹಿತಿಗಾಗಿ ಕೃಷಿ ಸಲಹೆಗಾರರು ಡಾ.ವಿ. ಎಂ. ಹೆಗಡೆ ದೂ. 9449937364 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.