ಶಿರಸಿ: ಈಗಾಗಲೇ ನಡೆದಿರುವ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ ಜೂನ 14 ರಂದು ಮಧ್ಯಾಹ್ನ 3 ಘಂಟೆಗೆ ಮಂಚೀಕೇರಿ ಸಮಾಜ ಮಂದಿರ ಆವಾರದಲ್ಲಿ ಬೃಹತ್ ಸಭೆಯ ಸ್ವರೂಪ ಪಡೆದುಕೊಳ್ಳಲಿದೆ. ಹಸಿರು ಸ್ವಾಮೀಜಿ ಎಂದೇ ಖ್ಯಾತರಾದ ಪರಮಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುವ ಮಂಚೀಕೇರಿ ಸಮಾವೇಶದಲ್ಲಿ ಉ.ಕ ಜಿಲ್ಲೆಯ ಪರಿಸರ ತಜ್ಞರು, ರೈತರು, ಸಂಘ ಸಂಸ್ಥೆಗಳು, ಸಹಕಾರಿ ಧುರೀಣರು ನೂರಾರು ಗ್ರಾಮ ಪಂಚಾಯತ ಜನ ಪ್ರತಿನಿಧಿಗಳು, ಮಾತೃ ಮಂಡಳಿಗಳು, ಗ್ರಾಮ ಅರಣ್ಯ ಸಮಿತಿಗಳು ಜೀವ ವೈವಿಧ್ಯ ಸಮಿತಿಗಳು, ಸೀಮಾ ಪರಿಷತ್ ಗಳು ಪಾಲ್ಗೊಳ್ಳಲಿವೆ ಎಂದು ಸಂಚಾಲಕರು ತಿಳಿಸಿದ್ದಾರೆ.
ಪೂಜ್ಯ ಸೋಂದಾ ಜೈನ ಮಠದ ಸ್ವಾಮೀಜಿಯವರು, ಸಚಿವರಾದ ಶ್ರೀನಿವಾಸ ಪುಜಾರಿ, ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ,ಶಾಸಕರಾದ ಆರ್.ವಿ.ದೇಶಪಾಂಡೆ, ರೂಪಾಲಿ ನಾಯ್ಕ, ಶಾಂತಾರಾಮ ಸಿದ್ಧಿ, ವಿ.ಎಸ್. ಪಾಟೀಲ್, ಪ್ರಮೋದ ಹೆಗಡೆ ರಾಜಕೀಯ ಮುಖಂಡರಾದ ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ ಇವರನ್ನು ಆಹ್ವಾನಿಸಲಾಗಿದೆ. ಪರಿಸರ ವಿಜ್ಞಾನಿಗಳು ಅಭಿಪ್ರಾಯ ಮಂಡಿಸಲಿದ್ದಾರೆ.
ಬೇಡ್ತಿ-ವರದಾ ಯೋಜನೆ ಕಾಳಿ ನದಿ ತಿರುವು ಯೋಜನೆ, ಅಘನಾಶಿನಿ ತಿರುವು ಮುಂತಾದ ಯೋಜನೆಗಳನ್ನು ತಡೆಯುವ ವಿಷಯ ಚರ್ಚೆಗೆ ಬರಲಿದೆ. ಮುಂದಿನ ಹೋರಾಟದ ಸ್ವರೂಪ, ಸರ್ಕಾರದ ಜೊತೆ ಮಾತುಕತೆ, ಒತ್ತಡ ನರ‍್ಮಾಣ, ಕಾಯಿದೆ ಕಾನೂನು ವಿಷಯ ಪ್ರಸ್ತಾಪ ಆಗಲಿದೆ.
ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನವನ್ನು ಜೂನ 5 ರಂದು ಶಾಲ್ಮಲಾ ನದಿಯಲ್ಲಿ ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿ ತಮ್ಮ ಬೆಂಬಲ ವ್ಯಕ್ತಮಾಡಿ ಬೇಡ್ತಿ ಸಮಿತಿಯ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬೇಡ್ತಿ-ವರದಾ ಡಿಪಿಆರ್ ರದ್ದು ಮಾಡಿ ಯೋಜನೆ ಕೈಬಿಡಿ ಎಂದು ನಿರ್ಣಯ ಕೈಗೊಳ್ಳಲಿದ್ದೇವೆ. ಎಂದು ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು ತಿಳಿಸಿದ್ದಾರೆ.
ಬೇಡ್ತಿ-ಅಘನಾಶಿನಿ ಕಣಿವೆ ಪ್ರದೇಶದ ಜನತೆ ಜೂನ 14 ರಂದು ಮಂಚೀಕೇರಿಗೆ ಬಂದು ತಮ್ಮ ಬಲವಾದ ಧ್ವನಿ ಎತ್ತಬೇಕು ಎಂದು ಸಮಿತಿಯ ಅಧ್ಯಕ್ಷ ವಿ.ಎನ್.ಹೆಗಡೆ ಸಮಾವೇಶದ ಸಂಚಾಲಕ ಶ್ರೀಪಾದ ಶಿರನಾಲಾ ಕರೆ ನೀಡಿದ್ದಾರೆ.